ವಿಜಯಪುರ: ಇತ್ತೀಚೆಗೆ ನಡೆದ ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರ–ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಸೆಪ್ಟೆಂಬರ್ 2 ರಂದು ಬೆಳಗಿನ ಜಾವ ಸುಮಾರು 2.30ಕ್ಕೆ ಕಳ್ಳತನ ನಡೆದಿತ್ತು. ಆರೋಪಿಗಳು ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಶೆಟರ್‌ನ ಬೀಗ ಹಾಗೂ ಸೇಫ್ ಲಾಕರ್ ಕತ್ತರಿಸಿ, 19.29 ಲಕ್ಷ ಹಣವಿದ್ದ ಕ್ಯಾಶೆಟ್ ಸಮೇತ ಪರಾರಿಯಾಗಿದ್ದರು.
ಬ್ಯಾಂಕ್ ವ್ಯವಸ್ಥಾಪಕ ಶರಣಪ್ಪ ನೀಡಿದ ದೂರಿನ ಮೇರೆಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ
ತನಿಖೆ ಆರಂಭಿಸಲಾಗಿತ್ತು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ 3.60 ಲಕ್ಷ ನಗದು, ಸ್ಕಾರ್ಪಿಯೊ ವಾಹನ, ಗ್ಯಾಸ್ ಕಟ್ಟರ್ ಹಾಗೂ ಸ್ಕ್ರೂ ಡ್ರೈವರ್ ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಹರಿಯಾಣದ ಪಾಲ್ವಾಲ್ ಜಿಲ್ಲೆಯ ಸಾಹಿಲ್ (24), ಉತ್ತರ ಪ್ರದೇಶದ ಮೀರಠ್ ಜಿಲ್ಲೆಯ ಕಮರಿಯಾಬ್ (50) ಹಾಗೂ ಆಕಾಶ್ (27) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಹರಿಯಾಣ ಮತ್ತು ಉತ್ತರ ಪ್ರದೇಶದ ಒಟ್ಟು ಆರು ಮಂದಿ ಸೇರಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಟಿಎಂಗಳನ್ನು ಗೂಗಲ್ ಮ್ಯಾಪ್ ಮೂಲಕ ಗುರುತಿಸಿ, ಸೂಕ್ತ ಎಟಿಎಂಗಳನ್ನು ಆಯ್ಕೆ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಗೊಳಸಂಗಿ ಎಟಿಎಂ ದರೋಡೆಗೂ ಇದೇ ರೀತಿಯಲ್ಲಿ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್, ವಿಜಯಪುರ
PublicNext
11/09/2026 05:04 pm
LOADING...