ವಿಜಯಪುರ: ಎಂ.ಬಿ.ಪಾಟೀಲರು ಏನಾದ್ರು ನನಗೆ ಧಮ್ಕಿ ಕೊಟ್ರೆ..‘ಮುಂದಿನ ಚುನಾವಣೆಯಲ್ಲಿ ಹೇಗೆ ಎಂಎಲ್‌ಎ ಆಗುತ್ತೀರಿ ಅಂದ್ರ ನನ್ನನ್ನು ಎಂಎಲ್‌ಎ ಮಾಡಿದ್ದು ಎಂ.ಬಿ.ಪಾಟೀಲರಲ್ಲ, ಕ್ಷೇತ್ರದ ಜನತೆ” ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ನಿಮ್ಮಂತೆ ಹುಚ್ಚುಚ್ಚರಾಗಿ ಮಾತನಾಡುವುದಿಲ್ಲ. ನಿಮ್ಮನ್ನು ಸೋಲಿಸುತ್ತೇನೆ, ಹೀಗೆ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ನಿಮ್ಮ ಬಳಿ ಸಾಕಷ್ಟು ಹಣವಿದೆ. ಹಿಂದೆ ಯಡಿಯೂರಪ್ಪ ಅವರಿಗೆ ಹಣ ನೀಡಿ ವೀಕ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆದ್ದಿದ್ದೀರಿ. ಈ ಬಾರಿಯೂ ವಿಜಯೇಂದ್ರನಿಗೆ ಹಣ ನೀಡಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಬಹುದು. ಆದರೆ ನನ್ನ ಹೋರಾಟ ಮತ್ತು ಸಂಘರ್ಷ ಮುಂದುವರಿಯಲಿದೆ ಎಂದು ಹೇಳಿದರು.
ಮುಂದಿನ ವಿಧಾನಸಭೆಯಲ್ಲಿ ನಾನು ಇರುತ್ತೇನೆಯೋ, ನೀವು ಇರುತ್ತೀರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ನಂಬರ್ ಒನ್ ಕುರ್ಚಿಯಲ್ಲಿ ನಾನು ಕುಳಿತುಕೊಳ್ಳುತ್ತೇನೆಯೋ, ನೀವು ನನ್ನ ಮುಂದೆ ಲೆಟರ್ ಹಿಡಿದು ನಿಲ್ಲುವ ಪರಿಸ್ಥಿತಿ ಬರುತ್ತದೆಯೋ ಯಾರಿಗೆ ಗೊತ್ತು?” ಎಂದು ಯತ್ನಾಳ್ ವ್ಯಂಗ್ಯವಾಡಿದರು.
“ನನ್ನ ಬಳಿ ಹಣ ಇದೆ ಎಂಬ ಕಾರಣಕ್ಕೆ ಹುಚ್ಚುಚ್ಚರಾಗಿ ಮಾತನಾಡಬಾರದು. ನನಗೆ ಸೋನಿಯಾ ಗಾಂಧಿ ಗೊತ್ತು, ಅಮಿತ್ ಶಾ ಗೊತ್ತು, ಮೋದಿ ಗೊತ್ತು ಎಂದು ನಾನು ಹೇಳುವುದಿಲ್ಲ. ನನಗೆ ಗೊತ್ತಿರುವುದು ನಮ್ಮ ವಿಜಯಪುರದ ಜನ ಮಾತ್ರ. ಜನ ಮನಸ್ಸು ಮಾಡಿದರೆ ಯಾರನ್ನಾದರೂ ಗೆಲ್ಲಿಸಬಹುದು, ಯಾರನ್ನಾದರೂ ಸೋಲಿಸಬಹುದು ಎಂದರು.
ತಮಿಳುನಾಡಿನ ರಾಜಕೀಯವನ್ನು ಉಲ್ಲೇಖಿಸಿದ ಯತ್ನಾಳ್, ದೊಡ್ಡ ಪಕ್ಷಗಳನ್ನೇ ಜನ ತಿರಸ್ಕರಿಸಿ ಹೊಸ ರಾಜಕೀಯ ಶಕ್ತಿಗಳಿಗೆ ಅವಕಾಶ ನೀಡಿದ್ದಾರೆ. ಅದೇ ರೀತಿ ವಿಜಯಪುರದಲ್ಲೂ ಬದಲಾವಣೆ ಆಗಬಹುದು ಎಂದು ಹೇಳಿದರು.
ಇದೇ ವೇಳೆ, ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಎಂ.ಬಿ.ಪಾಟೀಲರ ಸಹೋದರನಿಗೆ ಸಮೀಪವಾಗಿರುವ ಜೆಸಿಬಿ ಅಭ್ಯರ್ಥಿಯಿಂದ ಎಂ.ಬಿ.ಪಾಟೀಲರು 31,618 ಮತಗಳ ಅಂತರದಿಂದ ಹಿನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಇದೀಗ ಜೆಸಿಬಿ ಪಕ್ಷದ ಅಭ್ಯರ್ಥಿ ಸುಮಾರು 60 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಜೆಸಿಬಿಗೆ ಭಾರಿ ಮುನ್ನಡೆಯಾಗಿದೆ” ಎಂದು ಹೇಳಿದರು.
ಬಸನಗೌಡ ಪಾಟೀಲ ಯತ್ನಾಳ್ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರು ಸತ್ಯ ಎಂದು ಇದೇ ವೇಳೆ ಯತ್ನಾಳ್ ಭವಿಷ್ಯ ನುಡಿದರು.
PublicNext
15/09/2026 09:28 pm