ಸಕಲೇಶಪುರ : ಕೃಷಿ ಎಂದರೆ ಕೇವಲ ಬೆಳೆ ಇಳುವರಿ ಪಡೆಯುವುದಷ್ಟೇ ಅಲ್ಲ, ನಿಸರ್ಗದೊಂದಿಗೆ ಹೊಂದಿಕೊಂಡು ಭೂಮಿಯ ಆರೋಗ್ಯವನ್ನು ಕಾಪಾಡುವುದೂ ಕೃಷಿಯ ಪ್ರಮುಖ ಭಾಗವಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಸಕಲೇಶಪುರ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗದ್ದೆ ಗ್ರಾಮದ ರೈತ ಪುಟ್ಟಸ್ವಾಮಿಗೌಡ ಅವರ ಜಮೀನಿನಲ್ಲಿ ಬುಧವಾರ ನಡೆದ ಕಾಡು ಕೃಷಿಕರ 20ನೇ ಪಾಠಶಾಲೆಯನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕಾಡು-ತೋಟಕ್ಕೆ ಭೇಟಿ ನೀಡಿದ ಅವರು ವಿವಿಧ ಜಾತಿಯ ಕಾಡು ಮರಗಳು, ದೇಶೀಯ ಹಾಗೂ ವಿದೇಶಿ ಹಣ್ಣಿನ ಗಿಡಗಳು, ಕಾಫಿ ತೋಟ, ಮಣ್ಣು ಮತ್ತು ನೀರು ಸಂರಕ್ಷಣೆ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ವೀಕ್ಷಿಸಿದರು.
ಕೃಷಿ ಪುರಾತನ ವಿದ್ಯೆಯಾಗಿದ್ದು, ನಾಲ್ಕು ಗೋಡೆಗಳ ನಡುವೆ ಕಲಿಯುವುದಕ್ಕಿಂತ ಹೊಲದಲ್ಲೇ ಕೃಷಿ ಕಲಿತು ಭೂಮಿಯ ಸೇವೆ ಮಾಡುವ ರೈತರು ನಿಜವಾದ ಪದವೀಧರರು ಹಾಗೂ ವಿಜ್ಞಾನಿಗಳು ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ವಿವೇಚನೆಯಿಲ್ಲದ ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ಆಹಾರದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ನಿಸರ್ಗದ ಮಾದರಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಕಾಡು ಕೃಷಿ ಪಾಠಶಾಲೆಯ ಪ್ರಯತ್ನ ಶ್ಲಾಘನೀಯ ಎಂದರು.
ದಟ್ಟ ಕಾಡಿನಲ್ಲಿ ಮಾನವನ ನಿರಂತರ ಆರೈಕೆಯಿಲ್ಲದೆ ಮರ-ಗಿಡಗಳು ಪರಸ್ಪರ ಸಹಬಾಳ್ವೆಯಿಂದ ಬೆಳೆಯುತ್ತವೆ. ಇದೇ ನೈಸರ್ಗಿಕ ತತ್ವವನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಪರಿಸರ ಸ್ನೇಹಿ ಹಾಗೂ ಲಾಭದಾಯಕ ಕೃಷಿಯತ್ತ ರೈತರನ್ನು ಕೊಂಡೊಯ್ಯುವುದು ಕಾಡು ಕೃಷಿಯ ಉದ್ದೇಶ ಎಂದು ತಿಳಿಸಿದರು.
ಕಾಡು ಕೃಷಿ ಪಾಠಶಾಲೆಯ ಸಂಸ್ಥಾಪಕ ಡಾ. ಮಳಲಿಗೌಡ ಅವರ ಕಾರ್ಯವನ್ನು ಶ್ಲಾಘಿಸಿದ ಅವರು, ವಿದೇಶದ ಅವಕಾಶಗಳನ್ನು ಬಿಟ್ಟು ದೇಶಕ್ಕೆ ಮರಳಿ ಸಾಮಾನ್ಯ ರೈತರೊಂದಿಗೆ ನಿಂತು ನಿಸರ್ಗಾಧಾರಿತ ಕೃಷಿಯ ಪರಿಕಲ್ಪನೆಯನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮಳೆ ಕೊರತೆ, ನೀರು, ವಿದ್ಯುತ್ ಹಾಗೂ ಮಾರುಕಟ್ಟೆ ಸೇರಿದಂತೆ ಹಲವು ಸವಾಲುಗಳನ್ನು ರೈತರು ಎದುರಿಸುತ್ತಿದ್ದಾರೆ. ರೈತರ ಬದುಕು ಸುಧಾರಿಸಲು ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಹೇಳಿದರು.
Kshetra Samachara
11/09/2026 06:00 pm