ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಮನೆ ಅಂಗಳಕ್ಕೆ ಜಿಲ್ಲಾಧಿಕಾರಿ; ಹುದ್ದೆ ಮರೆತು ಆತ್ಮೀಯ ಅತಿಥಿಯಾದರು!

ಸಕಲೇಶಪುರ : ಕೆಲವು ಭೇಟಿಗಳು ಕೇವಲ ಭೇಟಿಗಳಲ್ಲ; ಅವು ಬದುಕಿನುದ್ದಕ್ಕೂ ಮರೆಯಲಾಗದ ನೆನಪುಗಳಾಗುತ್ತವೆ. ಅಂತಹ ಅಪರೂಪದ ಆತ್ಮೀಯ ಕ್ಷಣಕ್ಕೆ ಸಾಕ್ಷಿಯಾಯಿತು ಸಕಲೇಶಪುರದ ಪ್ರಗತಿಪರ ರೈತ ವೈ.ಸಿ. ರುದ್ರಪ್ಪ ಅವರ ಮನೆ ಅಂಗಳ.

ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಅವರು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರನ್ನು ರೈತ ವೈ.ಸಿ. ರುದ್ರಪ್ಪ ಅವರ ಮನೆಗೆ ಕರೆತಂದರು. ಕೃಷಿ ಚಟುವಟಿಕೆಗಳನ್ನು ವೀಕ್ಷಿಸಲು ಬಂದ ಜಿಲ್ಲಾಧಿಕಾರಿ, ರೈತನ ಮನೆಗೆ ಕಾಲಿಟ್ಟ ಕ್ಷಣದಿಂದಲೇ ಅಲ್ಲಿನ ಮಣ್ಣು, ಗಿಡ-ಮರಗಳು ಹಾಗೂ ಸರಳ ಬದುಕಿನೊಂದಿಗೆ ಆತ್ಮೀಯವಾಗಿ ಬೆರೆತರು.

ಮನೆಯ ತೋಟದಲ್ಲಿನ ತರಕಾರಿ ಗಿಡಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಅವರು, ಕೆಲವು ತರಕಾರಿಗಳನ್ನು ಸವಿದು, ಎರೆಹುಳು ಗೊಬ್ಬರ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯ ಕುರಿತು ವಿಚಾರಿಸಿದರು. ರುದ್ರಪ್ಪ ಅವರ ಮಡದಿಯೊಂದಿಗೆ ಕುಳಿತು ಕುಟುಂಬ ನಿರ್ವಹಣೆ, ಕೃಷಿ ಹಾಗೂ ಇಷ್ಟು ವರ್ಷಗಳ ಬದುಕಿನ ಅನುಭವಗಳನ್ನು ಆತ್ಮೀಯವಾಗಿ ಕೇಳಿಸಿಕೊಂಡರು.

ನಂತರ ತಂದೆ ವೈ.ಸಿ. ರುದ್ರಪ್ಪ ಅವರೊಂದಿಗೆ ಭತ್ತ, ಕಾಫಿ ಕೃಷಿ, ಕೃಷಿ ಅನುಭವ ಹಾಗೂ ಸಾಧನೆಗಳ ಕುರಿತು ಚರ್ಚಿಸಿ, ಅವರಿಗೆ ದೊರೆತ ಪ್ರಶಸ್ತಿಗಳನ್ನು ವೀಕ್ಷಿಸಿದರು. ಮನೆಯಲ್ಲೇ ತಯಾರಿಸಿದ ಅಕ್ಕಿರೊಟ್ಟಿ, ಎಣ್ಣೆಗಾಯಿ ಪಲ್ಯ, ಊಟ ಹಾಗೂ ಕಾಫಿಯನ್ನು ಸವಿದ ಜಿಲ್ಲಾಧಿಕಾರಿ, ರೈತ ಕುಟುಂಬದ ಸರಳತೆಯನ್ನು ಮನಸಾರೆ ಮೆಚ್ಚಿದರು.

“ಸರಳ ಮತ್ತು ಶ್ರೇಷ್ಠ ಜೀವನಕ್ಕೆ ನಿಮ್ಮ ಕುಟುಂಬವೇ ಮಾದರಿ” ಎಂಬ ಜಿಲ್ಲಾಧಿಕಾರಿಯವರ ಮಾತು ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಯಿತು.

ತಂದೆ ರುದ್ರಪ್ಪ ಅವರಿಗೆ ಏಲಕ್ಕಿ ಹಾರ ಹಾಕಿ ಗೌರವಿಸಿದ ಅವರು, ಕುಟುಂಬ ನೀಡಿದ ಫಲ-ತಾಂಬೂಲವನ್ನು ಆತ್ಮೀಯವಾಗಿ ಸ್ವೀಕರಿಸಿದರು. ಮನೆಯ ಹೇರಳೆಕಾಯಿ ಉಪ್ಪಿನಕಾಯಿಯ ಬಗ್ಗೆಯೂ ವಿಚಾರಿಸಿ, ರೈತನ ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲೂ ಆಸಕ್ತಿ ತೋರಿದರು.

“ನನ್ನ ಆಡಳಿತದ ನೆನಪುಗಳನ್ನು ಮರೆಸಿಬಿಡುವಂತಹ ಲೋಕ ನಿಮ್ಮದು” ಎಂಬ ಅವರ ಮಾತು, ಮಣ್ಣಿನೊಂದಿಗೆ ಬದುಕುತ್ತಿರುವ ರೈತ ಕುಟುಂಬದ ಸರಳತೆ, ಶ್ರಮ ಮತ್ತು ಸಂಸ್ಕೃತಿಗೆ ಅವರು ನೀಡಿದ ಗೌರವದ ಪ್ರತೀಕವಾಯಿತು.

ರೈತನ ಮನೆಗೆ ಬಂದದ್ದು ಜಿಲ್ಲಾಧಿಕಾರಿಯ ಹುದ್ದೆ; ಆದರೆ ಆ ಅಂಗಳದಲ್ಲಿ ಉಳಿದದ್ದು ಒಬ್ಬ ಆತ್ಮೀಯ ಅತಿಥಿಯ ನೆನಪು.

ರೈತರ ಬದುಕನ್ನು ಕಚೇರಿಯ ಕಡತಗಳಲ್ಲಿ ಮಾತ್ರವಲ್ಲ, ಅವರ ಮನೆ ಅಂಗಳಕ್ಕೆ ತೆರಳಿ ಅರಿಯುವ ಇಂತಹ ನಡೆ ಆಡಳಿತದ ಮಾನವೀಯ ಮುಖವನ್ನು ಪರಿಚಯಿಸುತ್ತದೆ. ಮಣ್ಣಿನ ವಾಸನೆ ಅರಿಯುವ ಆಡಳಿತ, ರೈತನ ಮನಸ್ಸು ಕೇಳಿಸಿಕೊಳ್ಳುವ ಅಧಿಕಾರಿ—ಇದೇ ಜನಪರ ಆಡಳಿತದ ನಿಜವಾದ ಸೊಗಡು.

Edited By :
PublicNext

PublicNext

12/09/2026 05:16 pm

Cinque Terre

9.62 K

Cinque Terre

0

ಸಂಬಂಧಿತ ಸುದ್ದಿ