ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ತಿ ವಿವಾದ: ಕಿತ್ತೂರಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ-ಮಗಳ ಬರ್ಬರ ಹತ್ಯೆ :ಮತ್ತೋರ್ವನಿಗೆ ಗಂಭೀರ ಗಾಯ

ಚನ್ನಮ್ಮನ ಕಿತ್ತೂರು: ಆಸ್ತಿ ಕಲಹದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯ ಒಳಗಡೆಯೇ ನಿವೃತ್ತ ಯೋಧ ಹಾಗೂ ಅವರ ಪುತ್ರಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ದಾಳಿಯಲ್ಲಿ ಮತ್ತೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಅವರಾದಿ ಗ್ರಾಮದ ನಿವಾಸಿ, ಮಾಜಿ ಸೈನಿಕ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ ಕೊಲೆಯಾದ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ರುದ್ರಪ್ಪ ಕುಂದರಗಿ ಕುಟುಂಬದಲ್ಲಿ ಹಲವು ದಿನಗಳಿಂದ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ತೀವ್ರ ವಿವಾದ ನಡೆಯುತ್ತಿತ್ತು. ಈ ವಿಚಾರವಾಗಿ ಮಾತುಕತೆ ಅಥವಾ ಕಾಗದಪತ್ರಗಳ ಪರಿಶೀಲನೆಗಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದ ವೇಳೆ ಜಗಳ ವಿಕೋಪಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ರುದ್ರಪ್ಪ ಅವರ ಇಬ್ಬರು ಸಹೋದರರು ಹಾಗೂ ಸಹೋದರನ ಪುತ್ರ ಏಕಾಏಕಿ ಮಾರಕಾಸ್ತ್ರಗಳಿಂದ ರುದ್ರಪ್ಪ ಮತ್ತು ಶಶಿಕಲಾ ಮೇಲೆ ದಾಳಿ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಕಣ್ಣೆದುರೇ ಈ ಭೀಕರ ಕೃತ್ಯ ಎಸಗಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ತಂದೆ-ಮಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆಯ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಭರತ್ ಎಸ್., ಗಂಗಾಧರ ಹಂಪಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ತನಿಖೆ ಚುರುಕುಗೊಳಿಸಿದ್ದಾರೆ. ಹಾಡಹಗಲೇ ಸರ್ಕಾರಿ ಕಚೇರಿಯಲ್ಲಿ ನಡೆದ ಈ ಜೋಡಿ ಕೊಲೆಯಿಂದ ಅವರಾದಿ ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.

Edited By :
PublicNext

PublicNext

16/09/2026 01:59 pm

Cinque Terre

19.22 K

Cinque Terre

1

ಸಂಬಂಧಿತ ಸುದ್ದಿ