ತುಮಕೂರು: ಜಿಲ್ಲೆಯಲ್ಲಿ ಈ ಬಾರಿ ತುಮಕೂರು ದಸರಾ-2026ನ್ನು ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ತುಮಕೂರು ದಸರಾ-2026’ರ ಅಧಿಕೃತ ಲಾಂಛನವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಕಳೆದ ವರ್ಷಗಳಲ್ಲಿ ವಿನ್ಯಾಸಗೊಳಿಸಲಾಗಿದ್ದ ದಸರಾ ಲಾಂಛನವನ್ನೇ ಈ ಬಾರಿಯೂ ಬಳಸಲಾಗುತ್ತಿದ್ದು, ಅಕ್ಟೋಬರ್ 11 ರಿಂದ ಅಕ್ಟೋಬರ್ 21ರವರೆಗೆ 10 ದಿನಗಳ ಕಾಲ ದಸರಾ ಉತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಈ ಮಹೋತ್ಸವಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗಿದ್ದು, ಅವರು ಆಗಮಿಸುವ ಭರವಸೆ ನೀಡಿದ್ದಾರೆ ಎಂದರು.
ಉತ್ಸವದ ವಿಶೇಷತೆಗಳು ಹಾಗೂ ಆಕರ್ಷಣೆಗಳು:
ತಂತ್ರಜ್ಞಾನ ಹಾಗೂ ಪ್ರದರ್ಶನ: ದಸರಾ ಅಂಗವಾಗಿ ಏರ್ಪಡಿಸುವ ವಸ್ತುಪ್ರದರ್ಶನದಲ್ಲಿ ಕೃತಕ ಬುದ್ಧಿಮತ್ತೆ (AI) ಹಾಗೂ ಆಧುನಿಕ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಜತೆಗೆ ಮಾಡರ್ನ್ ಕಾರುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಮಕ್ಕಳು ಹಾಗೂ ಕಲಾವಿದರಿಗೆ ವೇದಿಕೆ: ಸುಮಾರು 2,000ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಸ್ಥಳೀಯ ಯುವ ಕಲಾವಿದರಿಗೆ ಉತ್ತಮ ವೇದಿಕೆ ದೊರೆಯಲಿದೆ.
ಅಮಾನಿಕೆರೆ ಅಭಿವೃದ್ಧಿ: ತುಮಕೂರಿನ ಅಮಾನಿಕೆರೆಯನ್ನು ಕಲರ್‌ಫುಲ್ ಆಗಿ ರೂಪಿಸಲಾಗುತ್ತಿದ್ದು, ಇಲ್ಲಿ ನಿರ್ಮಿಸಲಿರುವ ಸುಮಾರು 100 ಅಡಿ ಎತ್ತರಕ್ಕೆ ಚಿಮ್ಮುವ ಕಾರಂಜಿ ಸಾರ್ವಜನಿಕರನ್ನು ಸೆಳೆಯುವ ಪ್ರಮುಖ ಕೇಂದ್ರವಾಗಲಿದೆ.
ಸೆಂಟರ್ ಆಫ್ ಅಟ್ರಾಕ್ಷನ್: ನಗರದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ವೃತ್ತವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ ಅಗತ್ಯವಿರುವ ಕೆಲವು ಸಾಮಾಗ್ರಿಗಳನ್ನು ಚೀನಾದಿಂದ ತರಿಸಲಾಗುತ್ತಿದೆ.
ಕಳೆದ ವರ್ಷದ ಯಶಸ್ಸು ಹಾಗೂ ಎಲ್ಲರ ಸಹಭಾಗಿತ್ವ:
ಎರಡು ವರ್ಷಗಳ ಹಿಂದೆ ಆರಂಭವಾದ ತುಮಕೂರು ದಸರಾ ಪರಿಕಲ್ಪನೆಯು ಇಂದು ಮೈಸೂರು ದಸರಾದಂತೆ ಜನರನ್ನು ಆಕರ್ಷಿಸುತ್ತಿದೆ. ಜಾತಿ, ಧರ್ಮಗಳ ಹಂಗಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುವ ಈ ಹಬ್ಬವು ಜಿಲ್ಲೆಯ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಬಿಂಬಿಸುವ ‘ಊರ ಹಬ್ಬ’ವಾಗಿದೆ. ಹಿಂದಿನ ವರ್ಷ ಇಸ್ರೋ ರಾಕೆಟ್ ಪ್ರದರ್ಶನ, 'ಪ್ರಚಂಡ' ಯುದ್ಧ ಹೆಲಿಕ್ಯಾಪ್ಟರ್ ಹಾಗೂ ಹೆಲಿ ರೈಡ್ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಬಿ.ವಿ. ಅಶ್ವಿಜ, ಎಸ್‌ಪಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಶುಭಾ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹೀದ ಜಂ ಜಂ ಸೇರಿದಂತೆ ಹಲವು ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
16/09/2026 04:03 pm