ಅಣ್ಣಿಗೇರಿ: ಪುರಸಭೆ ಸಭಾ ಭವನದಲ್ಲಿ ಅಧ್ಯಕ್ಷ ಶಿವಾನಂದ ಬೆಳಹಾರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯು ತೀವ್ರ ವಾಗ್ವಾದ ಹಾಗೂ ಪ್ರಮುಖ ನಿರ್ಣಯಗಳ ನಡುವೆ ಜರುಗಿತು.
ಅಭಿವೃದ್ಧಿ ವಿಷಯಗಳ ಚರ್ಚೆ ಹಾಗೂ ವಾಗ್ವಾದ:
ಸಭೆಯ ಆರಂಭದಲ್ಲಿ, ಉಪಾಧ್ಯಕ್ಷ ನಾಗರಾಜ ದಳವಾಯಿ ಹಾಗೂ ಸದಸ್ಯ ಸಿ.ಜಿ. ನಾವಳ್ಳಿ ಅವರು ಮಾತನಾಡಿ, ತಮ್ಮ ವಾರ್ಡ್‌ಗಳಿಗೆ ಸಂಬಂಧಿಸಿದ ಕೆಲ ಅಭಿವೃದ್ಧಿ ಕಾರ್ಯಗಳ ಕುರಿತು ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಲು ಹಲವು ದಿನಗಳ ಹಿಂದೆಯೇ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಇಂದಿನ ಸಭೆಯಲ್ಲಿ ಆ ವಿಷಯಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಸ್ಪಷ್ಟನೆ ನೀಡಿ, ಮುಂದಿನ ಸಭೆಯಲ್ಲಿ ಎಲ್ಲ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ವಿಷಯಗಳನ್ನು ಮಂಡಿಸುವುದಾಗಿ ಭರವಸೆ ನೀಡಿದ ಬಳಿಕ ಸದಸ್ಯರು ಸುಮ್ಮನಾದರು.
ಪ್ರಮುಖ ನಿರ್ಣಯಗಳು:
ಅನುದಾನ ಒಪ್ಪಿಗೆ: 16ನೇ ಹಣಕಾಸು ಯೋಜನೆ ಅಡಿಯಲ್ಲಿ ಹಂಚಿಕೆಯಾದ ರೂ. 3.32 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲು ಸದಸ್ಯರು ಒಪ್ಪಿಗೆ ನೀಡಿದರು. ಅಲ್ಲದೆ, 2026-27ನೇ ಸಾಲಿಗೆ ಕರೆದ ಟೆಂಡರ್‌ಗಳಿಗೆ ದರ ನಿಗದಿಪಡಿಸಲು ನಿರ್ಣಯಿಸಲಾಯಿತು.
ದರ ಹೆಚ್ಚಳ ಮುಂದೂಡಿಕೆ: ಕಟ್ಟಡ ಪರವಾನಗಿ, ನವೀಕರಣ ಹಾಗೂ ಮುಕ್ತಾಯ ಪ್ರಮಾಣ ಪತ್ರದ ದರ ಹೆಚ್ಚಿಸುವ ಕುರಿತು ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಕೆಲ ಸದಸ್ಯರು ಸದ್ಯ ದರ ಹೆಚ್ಚಿಸುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ಮುಂದಿನ ಸಭೆಗೆ ಚರ್ಚೆಯನ್ನು ಮುಂದೂಡಲಾಯಿತು.
ಮೂಲಭೂತ ಸೌಕರ್ಯ: ಪಟ್ಟಣದಲ್ಲಿ ತಗ್ಗು-ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲು ಅನುಮತಿ ನೀಡಲಾಯಿತು. ಬಾಕಿ ಉಳಿದಿರುವ ಪುರಸಭೆ ಮಳಿಗೆಗಳನ್ನು ಹರಾಜು ಮಾಡಲು ಮತ್ತು ಸಿ.ಎ. (CA) ನಿವೇಶನಗಳನ್ನು ಸಂಘ-ಸಂಸ್ಥೆಗಳಿಗೆ ಬಾಡಿಗೆ ರೂಪದಲ್ಲಿ ನೀಡಲು ಸದಸ್ಯರು ಸಮ್ಮತಿ ಸೂಚಿಸಿದರು.
ಇದೇ ವೇಳೆ ಪಟ್ಟಣದ ಕುಡಿಯುವ ನೀರಿನ ಕೆರೆಯ ಸುತ್ತಲೂ ಸ್ವಚ್ಛತೆ ಕಾಪಾಡುವುದು, ಬಂಗಾರಪ್ಪ ನಗರದ ನಿವಾಸಿಗಳಿಗೆ ಪಟ್ಟಾ ಬುಕ್ ವಿತರಿಸುವುದು ಹಾಗೂ ಪೌರ ಕಾರ್ಮಿಕರನ್ನು ನೇಮಕ ಮಾಡುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯ ಆರಂಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ಸಭೆಯಲ್ಲಿ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
17/09/2026 07:44 am