ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಮ್ಮನ ಕಿತ್ತೂರು : 38 ಗುಂಟೆ ಮಣ್ಣಿಗಾಗಿ ನೆತ್ತರ ಕೋಡಿ : ಗ್ರಾಮ ಪಂಚಾಯಿತಿಯಲ್ಲೇ ತಂದೆ-ಮಗಳ ಬರ್ಬರ ಹತ್ಯೆ.!

ಒಡಹುಟ್ಟಿದ ಅಣ್ಣ-ತಮ್ಮಂದಿರು... ಒಂದೇ ತಾಯಿಯ ಹಾಲು ಕುಡಿದು ಬೆಳೆದ ರಕ್ತ ಸಂಬಂಧಗಳು... ಆದ್ರೆ ಅದೇ ರಕ್ತ ಸಂಬಂಧ ಅಲ್ಪ ಆಸ್ತಿಗಾಗಿ ಕಟುಕನಂತೆ ವರ್ತಿಸಿದೆ! ಕೇವಲ 38 ಗುಂಟೆ ಜಮೀನು ಹಾಗೂ ಒಂದು ಹಳೇ ಮನೆಗಾಗಿ ಪಂಚಾಯಿತಿ ಕಚೇರಿಯಲ್ಲೇ ಭೀಕರ ರಕ್ತದೋಕುಳಿ ಹರಿದಿದೆ. ದೇಶ ಕಾಯ್ದು ಬಂದ ಮಾಜಿ ಯೋಧ ಹಾಗೂ ಇಂಜಿನಿಯರಿಂಗ್ ಓದಿದ್ದ ಮುದ್ದು ಮಗಳನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನ ಅವರಾಧಿಯಲ್ಲಿ ನಡೆದ ಈ ಬೆಚ್ಚಿಬೀಳಿಸೋ ಜೋಡಿ ಕೊಲೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹೌದು, ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅವರಾಧಿ ಗ್ರಾಮ ಇಂದು ಬೆಳ್ಳಂಬೆಳಗ್ಗೆ ಭೀಕರ ನರಮೇಧಕ್ಕೆ ಸಾಕ್ಷಿಯಾಗಿದೆ. ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ರುದ್ರಪ್ಪ ಕುಂದರಗಿ ಹಾಗೂ ಇವರ ಪುತ್ರಿ ಶಶಿಕಲಾ ಕುಂದರಗಿ ಬರ್ಬರವಾಗಿ ಕೊಲೆಯಾಗಿದ್ದಾರೆ. ರುದ್ರಪ್ಪ ಮತ್ತು ಅವರ ಸಹೋದರರ ನಡುವೆ ಹಲವು ವರ್ಷಗಳಿಂದ ಮನೆ ಹಾಗೂ 38 ಗುಂಟೆ ಜಮೀನಿನ ಹಂಚಿಕೆ ವಿವಾದವಿತ್ತು. ಇತ್ತೀಚೆಗಷ್ಟೇ ಕೋರ್ಟ್ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡುವಂತೆ ಮಹತ್ವದ ತೀರ್ಪು ನೀಡಿತ್ತು. ಕೋರ್ಟ್ ಆದೇಶದಂತೆ ತನ್ನ ಪಾಲಿನ ಆಸ್ತಿಯನ್ನು ಖಾತೆಗೆ ನೋಂದಾಯಿಸಲು ರುದ್ರಪ್ಪ ತಮ್ಮ ಇಂಜಿನಿಯರ್ ಮಗಳು ಶಶಿಕಲಾ ಜತೆ ಅವರಾಧಿ ಗ್ರಾಮ ಪಂಚಾಯಿತಿಗೆ ಬಂದಿದ್ದರು. ರುದ್ರಪ್ಪ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ, ಸಹೋದರರಾದ ಬಸಪ್ಪ, ಸಂಗಪ್ಪ ಮತ್ತು ಆತನ ಮಗ ಮಡಿವಾಳಪ್ಪ ಕುಡಗೋಲು ಹಿಡಿದು ಅಟ್ಟಹಾಸ ಮೆರೆದಿದ್ದಾರೆ. ಏಕಾಏಕಿ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ರುದ್ರಪ್ಪ ಪಂಚಾಯಿತಿ ಕೊಠಡಿಯೊಳಗೆ ಓಡಿದ್ದಾರೆ. ತಂದೆಯನ್ನು ರಕ್ಷಿಸಲು ಮುಂದಾದ ಶಶಿಕಲಾಳ ಜಡೆಯನ್ನು ಹಿಡಿದು ಕುಡಗೋಲಿನಿಂದ ಕೊಚ್ಚಿ ಕೊಂದ ಹಂತಕರು, ಬಳಿಕ ಪಂಚಾಯಿತಿ ಬಾಗಿಲನ್ನು ಒದ್ದು ಒಳನುಗ್ಗಿ, ಸಿಬ್ಬಂದಿಗೆ ಜೀವಬೆದರಿಕೆ ಹಾಕಿ ರುದ್ರಪ್ಪನನ್ನೂ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಹತ್ಯೆಯ ಹಿಂದೆ ಹಳೆಯ ಆಸ್ತಿ ಕಿತ್ತಾಟ ಮತ್ತು ವೈಷಮ್ಯದ ವಿಷಬೀಜವಿತ್ತು. ಆರೋಪಿಗಳ ವಾದದ ಪ್ರಕಾರ, ರುದ್ರಪ್ಪ ಈ ಹಿಂದೆಯೇ ತನ್ನ ಪಾಲಿನ ಆಸ್ತಿಯನ್ನು ಮಾರಿ ಧಾರವಾಡದಲ್ಲಿ ನೆಲೆಸಿದ್ದರು. ಆದರೂ ಉಳಿದ ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸಮಾನ ಹಂಚಿಕೆಗೆ ಆದೇಶಿಸಿದರೂ, ಸಹೋದರರು ಪಂಚಾಯಿತಿಗೆ ತಕರಾರು ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸದಂತೆ ತಡೆಹಿಡಿಯಲು ಯತ್ನಿಸಿದ್ದರು. ಆದರೆ, ಕೋರ್ಟ್ ಆದೇಶದ ಪ್ರತಿಯೊಂದಿಗೆ ರುದ್ರಪ್ಪ ಪಂಚಾಯಿತಿಗೆ ಬಂದದ್ದೇ ಹಂತಕರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯ ಸಿಕ್ಕ ಸಂತಸದಲ್ಲಿ ಗ್ರಾಮಕ್ಕೆ ಬಂದ ತಂದೆ-ಮಗಳು ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಿಡಿಒ ನೀಡಿದ ದೂರಿನ ಮೇರೆಗೆ ಕಿತ್ತೂರು ಠಾಣೆ ಪೊಲೀಸರು ಪರಾರಿಯಾಗಿರುವ ಮೂವರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

ದೇಶ ಕಾಯ್ದು ತಾಯ್ನಾಡಿಗೆ ಮರಳಿದ ಸೈನಿಕನಿಗೆ ಒಡಹುಟ್ಟಿದವರೇ ಕಂಟಕರಾಗಿದ್ದು ವಿಧಿಯ ಕ್ರೂರ ವ್ಯಂಗ್ಯ. ಕಷ್ಟಪಟ್ಟು ಮಗಳನ್ನು ಓದಿಸಿ ಇಂಜಿನಿಯರ್ ಮಾಡಿದ್ದ ತಂದೆ, ಇವತ್ತು ಮಗಳ ಕಣ್ಣೆದುರೇ ಪ್ರಾಣ ಬಿಟ್ಟಿದ್ದಾನೆ; ಅತ್ತ ಹೆತ್ತ ತಂದೆಯನ್ನು ಉಳಿಸಿಕೊಳ್ಳಲು ಹೋದ ಮಗಳು ಕೂಡ ಅದೇ ಸ್ಥಳದಲ್ಲಿ ಹೆಣವಾಗಿದ್ದಾಳೆ. ಅಲ್ಪ ಮಣ್ಣಿನ ಮೇಲಿನ ವ್ಯಾಮೋಹ ಮತ್ತು ಮತ್ಸರ ಇಡೀ ಕುಟುಂಬವನ್ನೇ ಬೀದಿಗೆ ತಂದು ನಿಲ್ಲಿಸಿದೆ. ಎರಡು ಜೀವಗಳನ್ನು ಬಲಿಪಡೆದ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಕಿತ್ತೂರು ಪೋಲೀಸ್ ಜಾಲ ಬಿಸಿದ್ದಾರೆ.

ಶೇಖರ ಕಲ್ಲೂರ ಪಬ್ಲಿಕ್ ನೆಕ್ಟ್ ಚನ್ನಮ್ಮನ ಕಿತ್ತೂರು

Edited By :
PublicNext

PublicNext

17/09/2026 08:33 am

Cinque Terre

12.36 K

Cinque Terre

0

ಸಂಬಂಧಿತ ಸುದ್ದಿ