ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: 140 ಹುದ್ದೆಗಳ ಭರ್ತಿಗೆ ಹೊಸ ಪ್ರಸ್ತಾವ, ಹಳೆಯ ಅರ್ಜಿದಾರರಿಗೆ ಮತ್ತೆ ಅರ್ಜಿ ಅಗತ್ಯವಿಲ್ಲ - ಜೊಲ್ಲೆ

ಚಿಕ್ಕೋಡಿ: ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನಲ್ಲಿ (ಬಿಡಿಸಿಸಿ) 140 ಖಾಲಿ ಹುದ್ದೆಗಳ ನೇಮಕಾತಿಗಾಗಿ ಹೊಸ ಪ್ರಸ್ತಾವವನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಮೀಸಲಾತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ಕೆಲವು ತಾಂತ್ರಿಕ ಅಂಶಗಳಲ್ಲಿ ತಿದ್ದುಪಡಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಆರಂಭಿಸಲಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಪರಿಷ್ಕರಿಸಿ ಸರ್ಕಾರದ ಅನುಮೋದನೆ ದೊರೆತ ತಕ್ಷಣ ನೇಮಕಾತಿ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಜಿಲ್ಲಾ ಬ್ಯಾಂಕ್‌ನಲ್ಲಿ ಈ ಹಿಂದೆ 104 ಹುದ್ದೆಗಳಿಗೆ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 21 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ, ವಿವಿಧ ಹುದ್ದೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಸೇರಿದಂತೆ ಕೆಲವು ತಾಂತ್ರಿಕ ವಿಷಯಗಳು ಎದುರಾದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗಿದೆ.

ಸರ್ಕಾರದ ನಿಯಮಗಳನ್ವಯ ಪರಿಷ್ಕೃತ ಪ್ರಸ್ತಾವವನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ವಿವಿಧ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಅಲ್ಲದೆ, ಪ್ರತಿಯೊಂದು ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಸಹಕಾರ ಇಲಾಖೆಯ ಸೂಚನೆಗಳನ್ನು ಪಾಲಿಸಿಯೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಹಳೆಯ ಅರ್ಜಿದಾರರಿಗೆ ಮತ್ತೆ ಅರ್ಜಿ ಅಗತ್ಯವಿಲ್ಲ

ಈ ಹಿಂದೆ 104 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ 21 ಸಾವಿರ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಜೊಲ್ಲೆ ಸ್ಪಷ್ಟಪಡಿಸಿದರು. ಹಳೆಯ ಅರ್ಜಿದಾರರ ಅರ್ಜಿಗಳನ್ನು ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುವುದು. ಆದರೆ ಪರಿಷ್ಕೃತ ಮೀಸಲಾತಿ ಅಥವಾ ಅರ್ಹತೆಯನ್ವಯ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಹೊಸ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

ಸರ್ಕಾರದಿಂದ ಪ್ರಸ್ತಾವಕ್ಕೆ ಅನುಮೋದನೆ ದೊರೆತ ನಂತರ ನೇಮಕಾತಿಯ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು. ಬಳಿಕ ಹುದ್ದೆವಾರು ಶೈಕ್ಷಣಿಕ ಅರ್ಹತೆ, ಮೀಸಲಾತಿ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಲಾಗುವುದು. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/09/2026 10:00 pm

Cinque Terre

8.28 K

Cinque Terre

0

ಸಂಬಂಧಿತ ಸುದ್ದಿ