ರಾಯಬಾಗ : ಪುರಸಭೆ ಅಧಿಕಾರಿಗಳ ಬಳಿ ಎಷ್ಟೇ ಕೇಳಿಕೊಂಡರೂ ಚರಂಡಿ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ನಾವು ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 7ರ ಪುರಸಭೆ ಸದಸ್ಯ ರಾವಸಾಹೇಬ ಗೌಲತ್ತಿನವರ ತಮ್ಮ ಅಳಲನ್ನು ಪಬ್ಲಿಕ್ ನೆಕ್ಸ್ಟ್ ವಾಹಿನಿ ಮುಂದೆ ಹಂಚಿಕೊಂಡಿದ್ದರು.
ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವಾಹಿನಿಯು "ಯಾರಿಗೆ ಹೇಳೋಣ ನಮ್ ಪ್ರಾಬ್ಲಮ್ಮು" ಎಂಬ ಶೀರ್ಷಿಕೆಯಡಿ ವಿಸ್ತೃತವಾದ ವರದಿಯೊಂದನ್ನು ಪ್ರಸಾರ ಮಾಡಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಕಾರ್ಯೋನ್ಮುಖರಾಗಿರುವ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಚರಂಡಿ ಸ್ವಚ್ಛತೆಗಾಗಿ ಧಾವಿಸಿದ್ದಾರೆ. ಬಹು ದಿನಗಳಿಂದ ಗಲೀಜಾಗಿ ಗಬ್ಬು ವಾಸನೆ ಹರಡುತ್ತಿದ್ದ ಚರಂಡಿಗಳು ಸ್ವಚ್ಛವಾಗುತ್ತಿವೆ. ಇದರಿಂದ ಸ್ಥಳೀಯ ನಿವಾಸಿಗಳು ಸಂತೋಷಗೊಂಡಿದ್ದಾರೆ. ಜೊತೆಗೆ ಪಬ್ಲಿಕ್ ನೆಕ್ಸ್ಟ್ ವಾಹಿನಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಆದರೆ ವಾರ್ಡ್ ಸಂಖ್ಯೆ 7ರ ಚರಂಡಿಗಳೇನೋ ಸ್ವಚ್ಛಗೊಳ್ಳುತ್ತಿವೆ, ಈ ಎಲ್ಲ ಚರಂಡಿಗಳ ನೀರನ್ನು ಹೊರಹಾಕುವ ಮುಖ್ಯ ಚರಂಡಿಯ ಕಾಮಗಾರಿಯು ಇಲ್ಲಿಯವರೆಗೂ ಅರ್ಧಕ್ಕೆ ನಿಂತಿದೆ. ಇದರಿಂದ ಎಲ್ಲ ಚರಂಡಿಗಳ ನೀರು ಗೌಲತ್ತಿನವರ ಸಮುದಾಯದ ಸ್ಮಶಾನದ ಬಳಿ ಶೇಖರಣೆಯಾಗಿ ಮುಖ್ಯರಸ್ತೆಯ ಮೇಲೆಲ್ಲ ಹರಿದಾಡುವ ಸಂಭವವಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕೆನ್ನುವುದು ಇಲ್ಲಿಯ ನಿವಾಸಿಗಳ ಮುಖ್ಯ ಬೇಡಿಕೆಯಾಗಿದೆ. ಅಂತೂ ಇಂತೂ ಕೊಂಚ ರಿಲ್ಯಾಕ್ಸ್ ಆಗಿರುವ ಇಲ್ಲಿಯ ನಿವಾಸಿಗಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗುತ್ತಾರಾ? ಅನ್ನೋದನ್ನ ಕಾಯ್ದು ನೋಡಬೇಕಿದೆ.
ವರದಿ: ಚಿದಾನಂದ ಐಹೊಳೆ ಪಬ್ಲಿಕ್ ನೆಕ್ಸ್ಟ್ ರಾಯಬಾಗ
PublicNext
20/09/2026 12:47 pm
LOADING...