ಬ್ರಹ್ಮಾವರ: 'ತುಳು ಭಾಷೆಗೆ ಯಾವುದೇ ಲಿಪಿ ಇಲ್ಲ, ಅದು ಕೇವಲ ಆಡುಭಾಷೆ ಮಾತ್ರ' ಎಂಬ ಹಲವು ವರ್ಷಗಳ ವಾದಕ್ಕೆ ತಕ್ಕ ಉತ್ತರ ನೀಡುವಂತಹ ನೂರಾರು ವರ್ಷಗಳಷ್ಟು ಹಳೆಯ ತುಳು ಲಿಪಿಯ ತಾಳೆಗರಿ ಸಂಗ್ರಹವೊಂದು ಬ್ರಹ್ಮಾವರ ತಾಲೂಕಿನ ಬಾರಕೂರು ಬಳಿಯ ಬಂಡೀಮಠದಲ್ಲಿ ಇಂದಿಗೂ ಭದ್ರವಾಗಿದೆ.
ಅಂದಾಜು 5 ತಲೆಮಾರುಗಳ ಹಿಂದೆ ಬಂಡೀಮಠದ ಸೀತಾರಾಮ ಅಡಿಗರು ನಾಡಿನ ಪ್ರಸಿದ್ಧ ವೇದ ವಿದ್ವಾಂಸರಾಗಿದ್ದರು. ಅಂದಿನ ಕಾಲದಲ್ಲೇ ಅವರು ತಾಳೆಗರಿಯಲ್ಲಿ ಅಂಡಲೆಕಾಯಿಯ ಶಾಯಿ ಹಾಗೂ ಚೂಪಾದ ಲೋಹದ ಸಲಕರಣೆಯನ್ನು ಬಳಸಿ, ತುಳು ಲಿಪಿಯಲ್ಲಿ ವೇದ ಮಂತ್ರಗಳನ್ನು ಬರೆದಿಟ್ಟಿದ್ದರು. ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ಅವರು ಮಾಡಿದ ಈ ಕಾರ್ಯ ಇಂದಿಗೂ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ.
ವೇದ ವಿದ್ವಾಂಸರ ಅಗ್ರಹಾರ, ಮಠ ಹಾಗೂ ಗುರುಕುಲ ಪರಂಪರೆಯನ್ನು ಹೊಂದಿದ್ದ ತುಳುನಾಡಿನ ಐತಿಹಾಸಿಕ ರಾಜಧಾನಿ ಬಾರಕೂರು. ಇಲ್ಲಿನ ಬಂಡೀಮಠದಲ್ಲಿ ಐದು ತಲೆಮಾರುಗಳಿಂದ ಈ ತಾಳೆಗರಿಗಳನ್ನು ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬರಲಾಗಿದೆ. ಪ್ರಸ್ತುತ ವೇದ ವಿದ್ವಾಂಸರಾದ ತಮ್ಮಣ್ಣ ಅಡಿಗರು ಈ ತಾಳೆಗರಿಗಳಲ್ಲಿರುವ ತುಳು ಲಿಪಿಯ ವೇದ ಮಂತ್ರಗಳನ್ನು ಇಂದಿಗೂ ನಿರಾಯಾಸವಾಗಿ ಓದುತ್ತಾರೆ.
ಬಂಡೀಮಠದ ವೇದ ವಿದ್ವಾಂಸರಾಗಿದ್ದ ರಾವೆಲ್ ಪದ್ಮನಾಭ ಅಡಿಗರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾಗಿದ್ದರು. ಇಂದಿಗೂ ಬಂಡೀಮಠದ ಅಡಿಗ ಕುಟುಂಬದವರೇ ಅಲ್ಲಿ ಅರ್ಚಕರಾಗಿದ್ದು, ತುಳು ಲಿಪಿಗೂ ಮತ್ತು ವೇದ ಪರಂಪರೆಗೂ ಇರುವ ಗಾಢ ಸಂಬಂಧವನ್ನು ಇದು ಎತ್ತಿಹಿಡಿಯುತ್ತದೆ. ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯ ಅಧಿಕೃತತೆ ಹಾಗೂ ಮಾನ್ಯತೆಯ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ
PublicNext
18/09/2026 02:50 pm
LOADING...