ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಕಡಿಯಾಳಿ ಗಣೇಶೋತ್ಸವಕ್ಕೆ 60ರ ಸಂಭ್ರಮ : ರಾಜ ದರ್ಬಾರಿನಲ್ಲಿ ಕಂಗೊಳಿಸುತ್ತಿದ್ದಾನೆ ವಜ್ರಮಹೋತ್ಸವದ ‘ಸಂಕಷ್ಟಹರ ಗಣಪತಿ’!

ಉಡುಪಿ: ಕೃಷ್ಣನಗರಿಯ ಪ್ರಪ್ರಥಮ ಸಾರ್ವಜನಿಕ ಗಣಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಈ ಬಾರಿ 60ನೇ ವರ್ಷದ ವಜ್ರಮಹೋತ್ಸವದ ಸಂಭ್ರಮದಲ್ಲಿದೆ. ಸತತ ಆರು ದಶಕಗಳ ಕಾಲ ಅನವರತ ಭಕ್ತಿ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಈ ಉತ್ಸವವು ದಿನದಿಂದ ದಿನಕ್ಕೆ ಸಾವಿರಾರು ಭಕ್ತರನ್ನು ಸೆಳೆಯುತ್ತಿದ್ದು, ಧಾರ್ಮಿಕ ವೈಭವ ಕಳೆಗಟ್ಟಿದೆ.

ರಾಜ ದರ್ಬಾರ್‌ನಲ್ಲಿ ವಿನಾಯಕನ ದರ್ಶನ ವಜ್ರಮಹೋತ್ಸವದ ಅಂಗವಾಗಿ ಈ ಬಾರಿ ‘ಸಂಕಷ್ಟಹರ ಗಣಪತಿ’ಯ ರೂಪದಲ್ಲಿ ವಿಘ್ನವಿನಾಶಕನನ್ನು ಪ್ರತಿಷ್ಠಾಪಿಸಲಾಗಿದೆ. ಭವ್ಯವಾಗಿ ನಿರ್ಮಿಸಲಾದ ‘ರಾಜ ದರ್ಬಾರ್’ ಮಾದರಿಯ ಆಕರ್ಷಕ ವೇದಿಕೆಯಲ್ಲಿ ಗಣಪತಿಯು ರಾಜ ಗಾಂಭೀರ್ಯದೊಂದಿಗೆ ವಿರಾಜಮಾನನಾಗಿದ್ದಾನೆ. ಚಿನ್ನದ ಕಿರೀಟ, ಪಾಶಾಂಕುಶ ಸೇರಿದಂತೆ ಕಣ್ಮನ ಸೆಳೆಯುವ ವಿವಿಧ ಸ್ವರ್ಣಾಭರಣಗಳಿಂದ ಶೃಂಗಾರಗೊಂಡಿರುವ ಗಣೇಶ ಮೂರ್ತಿಯ ದಿವ್ಯ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬರುತ್ತಿದೆ.

ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿ ಕೇವಲ ಧಾರ್ಮಿಕ ವಿಧಿ-ವಿಧಾನಗಳಿಗೆ ಮಾತ್ರ ಸೀಮಿತವಾಗದೆ, ಕಡಿಯಾಳಿ ಗಣೇಶೋತ್ಸವ ಸಮಿತಿಯು ಸಮಾಜಸೇವೆಯಲ್ಲೂ ಸದಾ ಮುಂಚೂಣಿಯಲ್ಲಿದೆ. ಬೆಳಕಿಲ್ಲದ ಅಸಹಾಯಕರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಅವಕಾಶವಂಚಿತರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಮಿತಿಯು ನೈಜ ಸಾಮಾಜಿಕ ಕಳಕಳಿ ಮೆರೆದಿದೆ.

ಕಲರವ ಮೂಡಿಸಿದ ಸಾಂಸ್ಕೃತಿಕ ವೈಭವ ಉತ್ಸವದ ಭಾಗವಾಗಿ ಭಜನೆ, ಕುಣಿತ ಭಜನೆ, ಯಕ್ಷಗಾನ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ದಿನವಿಡೀ ಜರುಗುತ್ತಿದ್ದು, ವಜ್ರಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದಿವೆ. ಇದರೊಂದಿಗೆ ಉಡುಪಿ ನಗರ ವ್ಯಾಪ್ತಿಯ ನೂರಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳನ್ನು ಒಗ್ಗೂಡಿಸಿ ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಆರು ದಶಕಗಳ ಭಕ್ತಿ, ಸಂಸ್ಕೃತಿ ಮತ್ತು ಜನಸೇವೆಯ ಸಂಕೇತವಾಗಿರುವ ಕಡಿಯಾಳಿ ಗಣೇಶನ ದರುಶನ ಪಡೆದು ಪುನೀತರಾಗಲು ಉಡುಪಿ ಹಾಗೂ ಸುತ್ತಮುತ್ತಲಿನ ಊರುಗಳಿಂದ ಭಕ್ತಾದಿಗಳು ನಿರಂತರವಾಗಿ ಆಗಮಿಸುತ್ತಿದ್ದಾರೆ.

— ಪ್ರಸಾದ್ ಸುವರ್ಣ, ಉಡುಪಿ

Edited By :
PublicNext

PublicNext

20/09/2026 12:05 pm

Cinque Terre

3.87 K

Cinque Terre

0

ಸಂಬಂಧಿತ ಸುದ್ದಿ