ದಾವಣಗೆರೆ: ಮೂರು ಮಕ್ಕಳ ತಾಯಿಯನ್ನ ಪ್ರಿಯಕರನೇ ಭೀಕರವಾಗಿ ಕತ್ತು ಸೀಳಿ ಕೊಲೆ ಮಾಡಿರುವ ದಾರುಣ ಘಟನೆ ದಾವಣಗೆರೆಯ ಶೇಖರಪ್ಪ ನಗರದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು 45 ವರ್ಷದ ನಾಗರತ್ನ ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ನಾಗರತ್ನಳೊಂದಿಗೆ ನಿಕಟ ಸಂಬಂಧ ಹೊಂದಿದ್ದ 36 ವರ್ಷದ ನಾಗರಾಜ್ ಈ ಕೃತ್ಯದ ಆರೋಪಿ ಎಂದು ತಿಳಿದುಬಂದಿದೆ. ನಾಗರತ್ನ ತನ್ನ ಪತಿಯನ್ನು ತೊರೆದು, ಮೂವರು ಮಕ್ಕಳನ್ನು ಬೇರೆಡೆ ಮನೆ ಮಾಡಿ ಬಿಟ್ಟು ಒಂಟಿಯಾಗಿ ವಾಸಿಸುತ್ತಿದ್ದರು. ಕಲ್ಯಾಣ ಮಂಟಪವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರತ್ನ ಅವರಿಗೆ ನಾಗರಾಜ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.
ಕೆಲ ದಿನಗಳಿಂದ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಈ ಗಲಾಚೆಯಿಂದ ಬೇಸತ್ತ ಸುತ್ತಮುತ್ತಲಿನ ನಿವಾಸಿಗಳು ಮನೆ ಖಾಲಿ ಮಾಡುವಂತೆ ನಾಗರತ್ನ ಅವರಿಗೆ ಸೂಚಿಸಿದ್ದರೂ, ಅವರು ಅಲ್ಲಿಯೇ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಸುಮಾರು 10:30ರ ವೇಳೆಗೆ ನಾಗರತ್ನ ಅವರ ಮನೆಗೆ ನುಗ್ಗಿದ ಆರೋಪಿ ನಾಗರಾಜ್, ಚಾಕುವಿನಿಂದ ಇರಿದು ಹಾಗೂ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದಿದ್ದಾನೆ.
ಕೊಲೆಗೈದು ಸ್ಥಳದಿಂದ ಪರಾರಿಯಾಗಲು ಆರೋಪಿ ನಾಗರಾಜ್ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯ ಕಿರುಚಾಟ ಕೇಳಿ ತಕ್ಷಣ ಧಾವಿಸಿಬಂದ ಸಾರ್ವಜನಿಕರು, ಸಮಯಪ್ರಜ್ಞೆ ಮೆರೆದು ಆರೋಪಿಯನ್ನು ಹಿಡಿದು ಸಮೀಪದ ತೆಂಗಿನ ಮರಕ್ಕೆ ಕಟ್ಟಿಹಾಕಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರ್‌ಎಂಸಿ ಯಾರ್ಡ್ (RMC Yard) ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.
PublicNext
19/09/2026 04:33 pm