ಮುಲ್ಕಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ನ್ಯಾಯಸಮ್ಮತ ಸೇವಾ ಹಾಗೂ ಆಡಳಿತಾತ್ಮಕ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಸಂಘಟಿತ ಒತ್ತಡ ತರುವ ನಿಟ್ಟಿನಲ್ಲಿ, ಸೆಪ್ಟೆಂಬರ್ 21ರ ಸೋಮವಾರದಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅದೇ ಹಾದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅರುಣ್ ಪ್ರದೀಪ್ ಡಿಸೋಜ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಡಿಒಗಳ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಉಗ್ರ ಹೋರಾಟಕ್ಕೆ ಮುಂದಾಗಿರುವುದಾಗಿ ಸ್ಪಷ್ಟಪಡಿಸಿದರು.
ಪ್ರಮುಖ ಬೇಡಿಕೆಗಳು:
ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಏಕಕಾಲದಲ್ಲಿ 'ಗ್ರೂಪ್-ಬಿ' (Group-B) ಹುದ್ದೆಗಳಾಗಿ ಉನ್ನತೀಕರಿಸಬೇಕು.
ಪಿಡಿಒಗಳ ಜ್ಯೇಷ್ಠತಾ ಪಟ್ಟಿಯಲ್ಲಿರುವ ಎಲ್ಲ ಗೊಂದಲ ಹಾಗೂ ಸಮಸ್ಯೆಗಳನ್ನು ತಕ್ಷಣ ನಿವಾರಿಸಿ, ಅರ್ಹ ಅಧಿಕಾರಿಗಳಿಗೆ ಯಾವುದೇ ವಿಳಂಬವಿಲ್ಲದೆ ಬಡ್ತಿ ನೀಡಬೇಕು.
ಗ್ರಾಮ ಪಂಚಾಯಿತಿಗಳಿಗೆ ಬಾಕಿಯಿರುವ 15ನೇ ಹಣಕಾಸು ಆಯೋಗದ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವುದರ ಜತೆಗೆ, ಸುಗಮ ಆಡಳಿತ ಮತ್ತು ಮೂಲಸೌಕರ್ಯ ನಿರ್ವಹಣೆಗೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕು.
ವಿ.ಬಿ.ಜಿ.–ರಾಮ್‌ಜಿ (VBGI-Ramji) ಯೋಜನೆಯನ್ನು ನಿಯಮಬಾಹಿರವಾಗಿ ಹಾಗೂ ಒತ್ತಾಯಪೂರ್ವಕವಾಗಿ ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು. ಜತೆಗೆ, ಈ ಯೋಜನೆಯ ಅನುಷ್ಠಾನಕ್ಕೆ ಸ್ಪಷ್ಟವಾದ ಮಾರ್ಗಸೂಚಿ, ಕಾರ್ಯವಿಧಾನ ಹಾಗೂ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು.
ಪಿಡಿಒಗಳ ಮೇಲೆ ಅನ್ಯ ಇಲಾಖೆಗಳ ಕೆಲಸಗಳನ್ನು ನಿರಂತರವಾಗಿ ಹೇರುವುದನ್ನು ಸ್ಥಗಿತಗೊಳಿಸಿ, ಹೆಚ್ಚುವರಿ ಕೆಲಸದ ಒತ್ತಡದಿಂದ ಮುಕ್ತಗೊಳಿಸಬೇಕು.
ಇ-ಸ್ವತ್ತು (e-Swathu) ತಂತ್ರಾಂಶದಲ್ಲಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಿ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡಲು ಅನುಕೂಲವಾಗುವಂತೆ ತಂತ್ರಾಂಶವನ್ನು ಸರಳೀಕರಿಸಬೇಕು.
ಸೋಮವಾರದಿಂದ ಪ್ರಾರಂಭವಾಗಲಿರುವ ಈ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿಯು ಸರ್ಕಾರದ ಗಮನ ಸೆಳೆಯುವಲ್ಲಿ ನಿರ್ಣಾಯಕವಾಗಲಿದೆ ಎಂದು ಅರುಣ್ ಪ್ರದೀಪ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
Kshetra Samachara
19/09/2026 08:24 pm