ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಸಾರ್ಥಕ ಅಂಗಾಂಗ ದಾನ - ಸಾವಿನಲ್ಲೂ ಸಾರ್ಥಕತೆ ಮೆರೆದು ನಾಲ್ವರಿಗೆ ಮರುಜೀವ ನೀಡಿದ ಪ್ರಕಾಶ್ ಆಚಾರ್ಯ

ಮಂಗಳೂರು: ಕುಟುಂಬಸ್ಥರ ನಿಸ್ವಾರ್ಥ ನಿರ್ಧಾರದಿಂದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ ಮಾಡಲಾಗಿದ್ದು, ನಾಲ್ವರು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ದೊರೆತಿದೆ. ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸೆ.19ರಂದು ಯಶಸ್ವಿಯಾಗಿ ಅಂಗಾಂಗ ಸಂಗ್ರಹ ಪ್ರಕ್ರಿಯೆ ನಡೆದಿದೆ.

ಉಳ್ಳಾಲ ತಾಲೂಕಿನ ಕೋಟೇಕಾರ್ ಸಮೀಪದ ಬೀರಿ, ಮದೂರು ಸೈಟ್ ನಿವಾಸಿ ಪ್ರಕಾಶ್ ಆಚಾರ್ಯ (50) ಸೆ.14ರಂದು ಮನೆಯ ಮುಂಭಾಗದಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಅವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಚೇತರಿಕೆ ಕಂಡುಬರಲಿಲ್ಲ. ವೈದ್ಯರನ್ನೊಳಗೊಂಡ ಮೆದುಳು ನಿಷ್ಕ್ರಿಯ ಪರಿಶೀಲನಾ ಸಮಿತಿಯು ಅಗತ್ಯ ತಪಾಸಣೆಗಳ ಬಳಿಕ ಸೆ.17ರಂದು ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಅಧಿಕೃತವಾಗಿ ಘೋಷಿಸಿತು.

ತೀವ್ರ ದುಃಖದ ನಡುವೆಯೂ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮತಿಸಿದ್ದು, ‘ಜೀವನ ಸಾರ್ಥಕತೆ’ ಮಾರ್ಗದರ್ಶನದಲ್ಲಿ ಸೆ.19ರಂದು ಅಂಗಾಂಗ ಸಂಗ್ರಹ ಪ್ರಕ್ರಿಯೆ ನೆರವೇರಿತು. ಕೆಎಂಸಿ ಮಣಿಪಾಲ ವೈದ್ಯಕೀಯ ತಂಡವು ಎರಡು ಮೂತ್ರಪಿಂಡಗಳನ್ನು ಸಂಗ್ರಹಿಸಿದ್ದು, ಅವು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇಬ್ಬರು ರೋಗಿಗಳಿಗೆ ಕಸಿ ಮಾಡಲು ಬಳಕೆಯಾಗಲಿವೆ. ಕೆಎಂಸಿ ಅತ್ತಾವರ ತಂಡವು ಎರಡು ಕಾರ್ನಿಯಾಗಳನ್ನು ಸಂಗ್ರಹಿಸಿದ್ದು, ಇಬ್ಬರಿಗೆ ದೃಷ್ಟಿ ನೀಡುವ ನಿರೀಕ್ಷೆಯಿದೆ.

ವೆನ್ಲಾಕ್ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ಅವರ ನೇತೃತ್ವದಲ್ಲಿ ನರಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಆಚಾರ್ಯ, ಅರಿವಳಿಕೆ ತಜ್ಞೆ ಡಾ. ರೆನಿಟಾ, ನರಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಸದಾನಂದ ಪೂಜಾರಿ ಹಾಗೂ ಡಾ. ರೋಹನ್ ಶೆಟ್ಟಿ ಸೇರಿದಂತೆ ವೈದ್ಯರು, ಸ್ನಾತಕೋತ್ತರ ವೈದ್ಯರು, ಓಟಿ ಮತ್ತು ಎಂಐಸಿಯು ಸಿಬ್ಬಂದಿ ಪ್ರಕ್ರಿಯೆಯಲ್ಲಿ ಸಹಕರಿಸಿದರು.

ಫೋರೆನ್ಸಿಕ್ ತಜ್ಞ ಡಾ. ರಮೇಶ್ ತಂಡದ ತ್ವರಿತ ಪೋಸ್ಟ್‌ಮಾರ್ಟಂ ಪ್ರಕ್ರಿಯೆ ಹಾಗೂ ರಾಜ್ಯ SOTTO ಸಂಯೋಜಕ ನೌಶಾದ್, ಡಿಡಿ ಡಾ. ಅರುಣ್ ಕುಮಾರ್, ಸಂಚಾಲಕ ಡಾ. ರವಿರಾಜ್ ಶೆಟ್ಟಿ, ವಲಯ ಸಂಯೋಜಕಿ ಪದ್ಮಾ ಮತ್ತು ಕೌನ್ಸಿಲರ್ ಶಿಲ್ಪಾ ಅವರ ಸಮನ್ವಯದಿಂದ ಅಂಗಾಂಗ ಸಾಗಣೆ ಸುಗಮವಾಗಿ ನಡೆಯಿತು.

Edited By :
PublicNext

PublicNext

20/09/2026 11:21 am

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ