ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಹೀಲಿಂಗ್ ಪುಂಡಾಟಕ್ಕೆ ಬಲಿಯಾಯ್ತು ಯುವಕನ ಪ್ರಾಣ: ಟಿಟಿ ಪಲ್ಟಿಯಾಗಿ ಓರ್ವ ಸಾವು, ಚಾಲಕ ಸೇರಿ ಐವರಿಗೆ ಗಂಭೀರ ಗಾಯ!

ಬೆಂಗಳೂರು: ರಾಜಧಾನಿಯಲ್ಲಿ ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ ಎನ್ನಲಾಗಿದೆ. ನಿನ್ನೆ ಮಧ್ಯರಾತ್ರಿ ನಗರದ ಅನ್ನಪೂರ್ಣೇಶ್ವರಿ ನಗರದ ಮಹಾದೇಶ್ವರ ದೇವಸ್ಥಾನದ ಬಳಿ ರಿಂಗ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯ ಎಲೆಕ್ಟ್ರಿಕ್ ಪೋಲ್‌ಗೆ ಟಿಟಿ ವಾಹನ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ ಹಾಗೂ ಚಾಲಕ ಸೇರಿ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಲಗ್ಗೆರೆ ಸಮೀಪದ ಏಳು ಜನ ಯುವಕರ ತಂಡ ಮಧ್ಯರಾತ್ರಿ ಟಿಟಿ ವಾಹನದಲ್ಲಿ ನಾಯಂಡಹಳ್ಳಿ ಕಡೆ ರಿಂಗ್ ರಸ್ತೆಯಲ್ಲಿ ಹೊರಟಿತ್ತು. ರವಿ ಎಂಬಾತ ವಾಹನ ಚಾಲನೆ ಮಾಡುತ್ತಿದ್ದ. ಈ ವೇಳೆ ಮಹಾದೇಶ್ವರ ದೇವಸ್ಥಾನದ ಬಳಿ ಸಾಗುತ್ತಿದ್ದಾಗ ದಿಢೀರನೆ ಎದುರಾದ ವ್ಹೀಲಿಂಗ್ ಪುಂಡರನ್ನು ತಪ್ಪಿಸಲು ಚಾಲಕ ರವಿ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಟಿಟಿ ವಾಹನವು ರಸ್ತೆ ಬದಿಯ ಎಲೆಕ್ಟ್ರಿಕ್ ಪೋಲ್‌ಗೆ ಬಲವಾಗಿ ಡಿಕ್ಕಿ ಹೊಡೆದು ಟಿಟಿ ವಾಹನ ಪಲ್ಟಿಯಾಗಿದೆ.

ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮನೋಜ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ರವಿ ಸೇರಿದಂತೆ ಉಳಿದ ಐವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ಮನೋಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ಸುದ್ದಿ ತಿಳಿದರೂ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ಬರಲು ಸುಮಾರು ಒಂದು ಗಂಟೆ ತಡವಾಯಿತು ಹಾಗೂ ಬಂದ ಆಂಬುಲೆನ್ಸ್‌ನಲ್ಲಿ ಕೇವಲ ಚಾಲಕ ಮಾತ್ರ ಇದ್ದು, ಅಗತ್ಯ ವೈದ್ಯಕೀಯ ಸಿಬ್ಬಂದಿ ಇರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಕೆರಳಿದ ಉದ್ರಿಕ್ತ ಸ್ಥಳೀಯರು ಸ್ಥಳದಲ್ಲಿ ಗಲಾಟೆ ನಡೆಸಿದರು.

ಅಲ್ಲದೆ, ನಗರದಲ್ಲಿ ತಡರಾತ್ರಿ ವ್ಹೀಲಿಂಗ್ ಹಾವಳಿ ಮಿತಿಮೀರುತ್ತಿದ್ದರೂ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ.

Edited By :
PublicNext

PublicNext

20/09/2026 01:41 pm

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ