ಸಂಪಾದಕೀಯ : ಕೇಶವ ನಾಡಕರ್ಣಿ
ಭ್ರಷ್ಟಾಚಾರದ ಕೂಪ ಎಂಬ ಕುಖ್ಯಾತಿಗೆ ಗುರಿಯಾಗಿರುವ KPSC ತನಿಖೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು, ಈಗ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯ ಸರಕಾರ KPSC ಹಗರಣಗಳ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿರುವಾಗಲೇ ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿ, SIT ರಚನೆ ಮೂಲಕ ಹೊಸದಾಗಿ ತನಿಖೆ ನಡೆಸಲು ಆದೇಶಿಸಿರುವುದು ಸರಕಾರಕ್ಕೆ ಆಘಾತವನ್ನುಂಟು ಮಾಡಿದೆ.
ಸಿಐಡಿ ತನಿಖೆ ನಡೆಯುತ್ತಿರುವಾಗಲೇ ವಿಶೇಷ ತನಿಖಾ ತಂಡ ರಚಿಸಿ ಹೊಸದಾಗಿ ತನಿಖೆ ನಡೆಸಲು ಹೈಕೋರ್ಟ್ ಆದೇಶಿಸಿರುವುದು ಸರಕಾರಕ್ಕೆ ಇರಿಸುಮುರಿಸುಂಟು ಮಾಡಿರುವುದು ಸುಳ್ಳಲ್ಲ. ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ಸಿಐಡಿ ತನಿಖೆಯಲ್ಲಿ ಈವರೆಗೂ ಯಾವುದೇ ನ್ಯೂನತೆ ಕಂಡುಬಂದಿಲ್ಲ ಹೀಗಿರುವಾಗ ಮತ್ತೊಂದು ತನಿಖಾ ತಂಡ ರಚಿಸಿರುವ ಔಚಿತ್ಯವೇನು? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸಹ SIT ತನಿಖೆ ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರಲ್ಲದೆ, ಹೈಕೋರ್ಟ್‌ನ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.
KPSC ಹಗರಣದಲ್ಲಿ ಸರಕಾರ, ಗೃಹಮಂತ್ರಿ ಅಥವಾ ಮುಖ್ಯಮಂತ್ರಿಗಳ ಯಾವುದೇ ಪಾತ್ರವಿಲ್ಲದಿರುವಾಗ, ಹೈಕೋರ್ಟ್ ರಚಿಸಿರುವ SIT ಬಗ್ಗೆ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಏಕೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ರಾಜ್ಯ ಸರಕಾರದ ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಇವರು ಯಾರನ್ನೋ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗುವುದಿಲ್ಲವೆ? ಕಳಂಕರಹಿತರಾಗಿದ್ದರೆ ಎಲ್ಲ ತನಿಖಾ ದಾಖಲೆಗಳನ್ನು SIT ಗೆ ಹಸ್ತಾಂತರಿಸಿ ಕೈ ತೊಳೆದುಕೊಳ್ಳಬಹುದಲ್ಲವೆ? ಸರಕಾರದ ವಿಚಾರ ಏಕೋ ಗೊಂದಲ ಸೃಷ್ಟಿಸುತ್ತಿದೆ ಅಲ್ಲವೆ?
ರಾಜ್ಯ ಹೈಕೋರ್ಟ್, ಹಿರಿಯ ಐಎಎಸ್ ಅಧಿಕಾರಿ, ಕಾರಾಗೃಹ ಡಿಜಿಪಿ ಅಲೋಕ ಕುಮಾರ್ ನೇತೃತ್ವದಲ್ಲಿ SIT (ವಿಶೇಷ ತನಿಖಾ ತಂಡ) ರಚಿಸಿ ಹೊಸದಾಗಿ ತನಿಖೆ ನಡೆಸುವಂತೆ ಆದೇಶಿಸಿದೆ. KPSC ಹಗರಣ ಕುರಿತಂತೆ ಸಿಐಡಿ ಈವರೆಗೆ ಸಂಗ್ರಹಿಸಿರುವ ಎಲ್ಲ ಸಾಕ್ಷ್ಯಗಳು ಹಾಗೂ ಪೊಲೀಸ್ ತನಿಖಾ ವ್ಯಾಪ್ತಿ ವಿವರಗಳನ್ನು ಹೊಸ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ ಅವರು ನಿರ್ದೇಶನ ನೀಡಿದ್ದಾರೆ.
ಇಷ್ಟೇ ಅಲ್ಲ ಸಂಬಂಧಪಟ್ಟ ಎಲ್ಲ ಇಲಾಖೆಗಳೂ ಹಾಗೂ ಏಜೆನ್ಸಿಗಳು SIT ಗೆ ಸಹಕಾರ ನೀಡಬೇಕು. ನೂರು ದಿನಗಳಲ್ಲಿ SIT ತನಿಖೆ ನಡೆಸಿ ತನ್ನ ವರದಿ ಸಲ್ಲಿಸಬೇಕು ಹಾಗೂ ಪ್ರತಿ ಮೂವತ್ತು ದಿನಗಳಿಗೊಮ್ಮೆ ತನ್ನ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆಯೂ ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಸ್ಪೆಂಡ್ ಆಗಿರುವ KPSC ಚೇರ್ಮನ್ ಶಿವಕುಮಾರ್ ಸಾಹುಕಾರ್ ಅವರ ಪುತ್ರಿಯ ಔದ್ಯಮಿಕ ವಿಸ್ತರಣಾಧಿಕಾರಿ ಹುದ್ದೆ ನೇಮಕಾತಿ ಹಾಗೂ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಪಟ್ಟಂತೆ ದಾಖಲಾಗಿರುವ ಎರಡು FIR ಗಳನ್ನು ಸಹ ಹೈಕೋರ್ಟ್ SIT ಗೆ ಹಸ್ತಾಂತರಿಸಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಕೆಲವು ವಿದ್ಯಾರ್ಥಿ ಸಂಘಟನೆಗಳು, KPSC ಹಗರಣ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ ಅವರು ಈ ಆದೇಶ ಹೊರಡಿಸಿದ್ದಾರೆ.
PublicNext
24/09/2026 10:43 pm