ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲ್ವೆ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಅನ್ಯಾಯದ ಆರೋಪ: ಕೆಲಸಕ್ಕಾಗಿ ಕಣ್ಣೀರು ಹಾಕುತ್ತಿರುವ ಯುವಕರು

ಹುಬ್ಬಳ್ಳಿ : ಕೆಲಸ ಎಂಬುದು ಈಗ ಎಲ್ಲರಿಗೂ ಅತ್ಯಗತ್ಯವಾಗಿದೆ. ಅದರಲ್ಲೂ ಸರ್ಕಾರಿ ಕೆಲಸ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಪಡೆಯಲು ಯುವಕ-ಯುವತಿಯರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ, ಅಪ್ರೆಂಟಿಸ್ ತರಬೇತಿ ಪಡೆದ ಅಭ್ಯರ್ಥಿಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ. ರೈಲ್ವೆ ಇಲಾಖೆಯ ನೇಮಕಾತಿ ವಿಚಾರದಲ್ಲಿ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡುತ್ತಿದೆ.

ಭಾರತೀಯ ರೈಲ್ವೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳು ಈಗ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುವಂತಾಗಿದೆ. ಕರ್ನಾಟಕದ ರೈಲ್ವೆ ಆಕ್ಟ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿದ ಮಹಾರಾಷ್ಟ್ರದ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದರೆ, ಕರ್ನಾಟಕದ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿಲ್ಲ ಎಂದು ಸ್ವತಃ ಅಭ್ಯರ್ಥಿಗಳೇ ಆರೋಪಿಸುತ್ತಿದ್ದಾರೆ. ರೈಲ್ವೆಯಲ್ಲಿ ಉದ್ಯೋಗ ಸಿಕ್ಕರೆ ಜೀವನ ನಿರ್ವಹಣೆ ಮಾಡಬಹುದು ಎಂದುಕೊಂಡಿದ್ದ ಯುವಕರು ಈಗ ನಿತ್ಯವೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಇನ್ನು, ರೈಲ್ವೆ ಇಲಾಖೆಯಲ್ಲಿ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳ ನಡುವೆಯೂ ಯಾರೊಬ್ಬರೂ ಕಾಳಜಿ ವಹಿಸುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಯುವ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ತಮ್ಮನ್ನು ನೇಮಕಾತಿ ಮಾಡಿಕೊಳ್ಳಬೇಕು ಅಥವಾ ದಯಾಮರಣ ನೀಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸ ಹಾಗೂ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರ ನಿವಾಸದ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/10/2026 01:19 pm

Cinque Terre

17.45 K

Cinque Terre

1

ಸಂಬಂಧಿತ ಸುದ್ದಿ