ಭಾಗ್ಯನಗರ : ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ರೈತರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿರಂತರ ಮಳೆಯಿಂದ ಮಾರುಕಟ್ಟೆಯ ರಸ್ತೆಗಳು ಕೆಸರುಮಯವಾಗಿವೆ. ಎಪಿಎಂಸಿ ಮುಖ್ಯದ್ವಾರದ ಬಳಿ ಮಳೆನೀರು ಸಂಗ್ರಹವಾಗಿ ಕೆರೆಯಂತಾಗಿರುವುದರಿಂದ ರೈತರು, ವ್ಯಾಪಾರಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮಾರುಕಟ್ಟೆಗೆ ಪ್ರತಿದಿನ ತರಕಾರಿ ಹಾಗೂ ವಿವಿಧ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ತರುವ ರೈತರು, ತಮ್ಮ ಉತ್ಪನ್ನಗಳನ್ನು ಸಾಗಿಸಲು ಮತ್ತು ವಾಹನಗಳನ್ನು ನಿಲ್ಲಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ಮೇಲೆ ಕೆಸರು ತುಂಬಿಕೊಂಡಿರುವುದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದ್ದು, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಗೆ ತೊಂದರೆಯಾಗುತ್ತಿದೆ.
ಮೂಲಸೌಕರ್ಯಗಳ ಕೊರತೆಯಿಂದ ರೈತರಿಗೆ ತೊಂದರೆ
ಎಪಿಎಂಸಿ ಆವರಣದಲ್ಲಿ ಸಮರ್ಪಕ ರಸ್ತೆ, ಚರಂಡಿ ಹಾಗೂ ಸ್ವಚ್ಛತಾ ವ್ಯವಸ್ಥೆ ಇಲ್ಲದಿರುವುದೇ ಮಳೆಗಾಲದಲ್ಲಿ ಸಮಸ್ಯೆ ತೀವ್ರಗೊಳ್ಳಲು ಕಾರಣ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಖ್ಯದ್ವಾರ ಸೇರಿದಂತೆ ಹಲವು ಭಾಗಗಳಲ್ಲಿ ನೀರು ನಿಂತು ಕೆಸರುಮಯ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ರೈತರು ಕಷ್ಟಪಟ್ಟು ಬೆಳೆದ ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಸಂದರ್ಭದಲ್ಲಿ ಇಂತಹ ಅವ್ಯವಸ್ಥೆ ಎದುರಾಗುತ್ತಿರುವುದು ಅವರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾರುಕಟ್ಟೆಗೆ ಉತ್ಪನ್ನಗಳನ್ನು ತರುವುದರಿಂದ ಹಿಡಿದು ಅವುಗಳನ್ನು ಇಳಿಸುವುದು, ಮಾರಾಟ ಮಾಡುವುದು ಹಾಗೂ ವಾಹನಗಳಲ್ಲಿ ಸಾಗಿಸುವವರೆಗೆ ವಿವಿಧ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಚಿಕ್ಕಬಳ್ಳಾಪುರ.
PublicNext
25/10/2026 05:45 pm
LOADING...