ಹುಬ್ಬಳ್ಳಿ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುವುದು ಅಕ್ಷರಶಃ ಸತ್ಯವಾದ ಮಾತು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹುಬ್ಬಳ್ಳಿಯ ಪುಟ್ಟ ಬಾಲಕಿ ಸುವಿಕ್ಷಾ ಹಳಪೇಟಿ ಹೆಸರು ಅಚ್ಚೊತ್ತಿರುವುದು ಹುಬ್ಬಳ್ಳಿಗೆ ಹೆಮ್ಮೆಯ ಸಂಗತಿಯಾಗಿದೆ.
ಟ್ರೆಡ್ಮಿಲ್ನಲ್ಲಿ 600 ಮೀಟರ್ ದೂರವನ್ನು 9 ನಿಮಿಷ 27 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಾಣ ಮಾಡುವ ಮೂಲಕ ಪುಟ್ಟ ಬಾಲಕಿ ಕುಟುಂಬಕ್ಕೆ ಮಾತ್ರವಲ್ಲದೆ, ಧಾರವಾಡ ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ.
ಹೌದು...ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹುಬ್ಬಳ್ಳಿಯ ಪುಟ್ಟ ಬಾಲಕಿ ಸುವಿಕ್ಷಾ ವಿನಾಯಕ ಹಳಪೇಟಿ ಸಾಬೀತುಪಡಿಸಿದ್ದಾಳೆ. ಕೇವಲ 1 ವರ್ಷ 8 ತಿಂಗಳ ವಯಸ್ಸಿನಲ್ಲಿಯೇ ಟ್ರೆಡ್ಮಿಲ್ನಲ್ಲಿ 600 ಮೀಟರ್ ದೂರವನ್ನು 9 ನಿಮಿಷ 27 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿರುವ ಸುವಿಕ್ಷಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.
2024ರ ಡಿಸೆಂಬರ್ 3ರಂದು ಜನಿಸಿದ ಸುವಿಕ್ಷಾ ಅವರ ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ಸಂಪಾದಕೀಯ ಮಂಡಳಿಯು 2026ರ ಆಗಸ್ಟ್ 31ರಂದು ದೃಢೀಕರಿಸಿದ್ದು, ಅವರಿಗೆ IBR Achiever ಗೌರವ ಲಭಿಸಿದೆ. ಹುಬ್ಬಳ್ಳಿಯ ಇಂದ್ರಪ್ರಸ್ಥ ನಗರದ ನಿವಾಸಿ, ಸ್ಕೇಟಿಂಗ್ ಮತ್ತು ಸೈಕ್ಲಿಂಗ್ ತರಬೇತುದಾರ ವಿನಾಯಕ ಹಳಪೇಟಿ ಹಾಗೂ ಸುಷ್ಮಾ ದಂಪತಿಯ ಪುತ್ರಿಯಾದ ಸುವಿಕ್ಷಾ, ತಂದೆಯ ಮಾರ್ಗದರ್ಶನದಲ್ಲಿ ಸುಮಾರು ಮೂರು ತಿಂಗಳ ಕಾಲ ಮನೆಯಲ್ಲಿ ತರಬೇತಿ ಪಡೆದಿದ್ದಳು. ಈ ಸಾಧನೆಯ ಹಿಂದೆ ತಂದೆಯ ಮಾರ್ಗದರ್ಶನದ ಜೊತೆಗೆ ತಾಯಿ ಸುಷ್ಮಾ, ಅಜ್ಜಿ ಶೈಲಾ ಹಾಗೂ ಕುಟುಂಬದವರ ಪ್ರೋತ್ಸಾಹವೂ ಪ್ರಮುಖವಾಗಿದೆ.
ಮೊದಲು ಈಜು ತರಬೇತಿ ಕೊಡಿಸಲು ತಂದೆ ವಿನಾಯಕ ಹಳಪೇಟಿ ಅವರು ಪ್ರಾರಂಭಿಸಿದ್ದರು. ಆದರೆ, ಕೆಲವು ಕಾರಣಗಳಿಂದ ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ಏಕೆಂದರೆ, ಹುಬ್ಬಳ್ಳಿಯಲ್ಲಿ ಪುಟ್ಟ ಮಕ್ಕಳಿಗೆ ಸೂಕ್ತವಾದ ಬೇಬಿ ಸ್ವಿಮ್ಮಿಂಗ್ ಪೂಲ್ ಇರಲಿಲ್ಲ. ಹುಬ್ಬಳ್ಳಿಯಲ್ಲಿರುವ ಈಜುಕೊಳಗಳಲ್ಲಿ ಕ್ಲೋರಿನ್ ಮಿಶ್ರಣ ಮಾಡಿರುವುದರಿಂದ ಮಗುವಿನ ಮೃದುವಾದ ಚರ್ಮಕ್ಕೆ ಸಮಸ್ಯೆ ಉಂಟಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದರು. ಈ ಕಾರಣದಿಂದ ತಾಯಿ ಸುಷ್ಮಾ ಅವರು ಮಗುವಿಗೆ ಈಜು ತರಬೇತಿ ಕೊಡಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಸದ್ಯಕ್ಕೆ ಈಜು ತರಬೇತಿಯನ್ನು ಬದಿಗಿರಿಸಲಾಯಿತು.
ಚಿಕ್ಕ ವಯಸ್ಸಿನಲ್ಲಿಯೇ ಸುವಿಕ್ಷಾ ತೋರಿದ ಈ ಪ್ರತಿಭೆ ಕುಟುಂಬದವರಲ್ಲಿ ಸಂತಸ ಮೂಡಿಸಿದ್ದು, ಹುಬ್ಬಳ್ಳಿ ನಗರಕ್ಕೂ ಹೆಮ್ಮೆ ತಂದಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರೆ ಅವರು ವಿಶಿಷ್ಟ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಸುವಿಕ್ಷಾ ಉತ್ತಮ ಉದಾಹರಣೆಯಾಗಿದ್ದಾಳೆ.
ಇದಲ್ಲದೆ, ಸುವಿಕ್ಷಾ ಅವರ ಅಣ್ಣ ಸುಷ್ವಿನ್ ವಿನಾಯಕ ಹಳಪೇಟಿ ಕೂಡ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾನೆ. ಸ್ಕೇಟಿಂಗ್ ಮತ್ತು ಸೈಕ್ಲಿಂಗ್ನಲ್ಲಿ ಸಾಧನೆ ಮಾಡಿರುವ ಸುಷ್ವಿನ್, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮೂಲಕ ಕುಟುಂಬದ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಪುಟ್ಟ ವಯಸ್ಸಿನಲ್ಲಿಯೇ ದಾಖಲೆ ನಿರ್ಮಿಸಿರುವ ಸುವಿಕ್ಷಾ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡಲಿ ಎಂದು ಕುಟುಂಬದವರು, ಹಿತೈಷಿಗಳು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/10/2026 01:18 pm