ಸಕಲೇಶಪುರ: ಬೆಂಗಳೂರು–ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಲಗಳಲೆ ಸಮೀಪ ಡಿವೈಡರ್‌ಗಳನ್ನು ಮುಚ್ಚುವ ಕಾಮಗಾರಿ ಆರಂಭಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕ್ರಮದಿಂದ ನೂರಾರು ಹಳ್ಳಿಗಳ ಜನರ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಅನುಕೂಲ ಮತ್ತು ರಸ್ತೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಗುಲಗಳಲೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವ ಈ ಪ್ರದೇಶದಲ್ಲಿ ಡಿವೈಡರ್‌ಗಳನ್ನು ಮುಚ್ಚುವುದರಿಂದ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು, ರೈತರು ಹಾಗೂ ನಿತ್ಯ ಸಂಚರಿಸುವ ವಾಹನ ಸವಾರರು ಅನಗತ್ಯ ಸುತ್ತು ಹಾಕಬೇಕಾದ ಪರಿಸ್ಥಿತಿ ಎದುರಾಗಬಹುದು. ಈಗಾಗಲೇ ರಸ್ತೆಯಲ್ಲಿರುವ ಹಲವು ತಿರುವುಗಳು ಸಂಚಾರದ ದೃಷ್ಟಿಯಿಂದ ಸವಾಲಾಗಿದ್ದು, ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲದೆ ಡಿವೈಡರ್‌ಗಳನ್ನು ಮುಚ್ಚಿದರೆ ಅಪಘಾತದ ಅಪಾಯ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮಲೆನಾಡು ರಕ್ಷಣಾ ಸೇನೆಯ ಹಾಸನ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಹೊಸಕೊಪ್ಪಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಗುಲಗಳಲೆ ಸಮೀಪದ ಡಿವೈಡರ್‌ಗಳನ್ನು ತೆರವುಗೊಳಿಸಿ ಸುರಕ್ಷಿತ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಅಗತ್ಯವಿರುವ ಸ್ಥಳದಲ್ಲಿ ಸೂಕ್ತ ಸಂಪರ್ಕ ಮಾರ್ಗ ನಿರ್ಮಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಸ್ಥಳೀಯರ ಅನುಕೂಲಕ್ಕಾಗಿ ಫ್ಲೈಓವರ್ ನಿರ್ಮಿಸುವ ಕುರಿತು ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
PublicNext
28/10/2026 07:15 pm
LOADING...