ಸಂತ್ರಸ್ತ ಕುಟುಂಬದ ಮನೆ ಬಾಗಿಲಲ್ಲೇ ಪರಿಶೀಲನಾ ಸಭೆ; ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ನಿರ್ಧಾರ
ಸಕಲೇಶಪುರ, ಅ. 29: ಕೃಷಿ ಕೂಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ರಾಜೇಂದ್ರಪುರ ಗ್ರಾಮದ ದುಶ್ಯಂತ್ (40) ಅವರ ಕುಟುಂಬಕ್ಕೆ ಸರ್ಕಾರದಿಂದ ₹2 ಲಕ್ಷ ಪರಿಹಾರ ಮಂಜೂರು ಮಾಡುವಂತೆ ಶಿಫಾರಸು ಮಾಡಲು ಸಕಲೇಶಪುರ ಉಪವಿಭಾಗ ಮಟ್ಟದ ಪರಿಶೀಲನಾ ಸಮಿತಿ ನಿರ್ಧರಿಸಿದೆ.
ಉಪವಿಭಾಗಾಧಿಕಾರಿ ಹುಲಿಮನಿ ತಿಮ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 27ರಂದು ನಡೆದ ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಬೆಂಕಿ ಅವಘಡ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಂತ್ರಸ್ತ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಮನೆ ಬಾಗಿಲಲ್ಲೇ ಸಭೆ ನಡೆಸಿ ಪ್ರಕರಣವನ್ನು ಪರಿಶೀಲಿಸಿರುವುದು ವಿಶೇಷವಾಗಿದೆ.
ಕೃಷಿ ಕೆಲಸದ ವೇಳೆ ಸಂಭವಿಸಿದ ದುರ್ಘಟನೆ
ರಾಜೇಂದ್ರಪುರ ಗ್ರಾಮದ ದುಶ್ಯಂತ್ ಅವರು 2026ರ ಮೇ 6ರಂದು ಹೊಸಗದ್ದೆ ಗ್ರಾಮದ ಮೋಹನ್ಗೌಡ ಅವರ ಕಾಫಿ ತೋಟದಲ್ಲಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದರು. ಸಿಲ್ವರ್ ಮರ ಕಡಿಯಲು ಅಲ್ಯೂಮಿನಿಯಂ ಏಣಿ ಬಳಸುತ್ತಿದ್ದ ಸಂದರ್ಭದಲ್ಲಿ ತೋಟದ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಅಸ್ವಸ್ಥಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮೃತರ ಪತ್ನಿ ಉಷಾ ಹೆಚ್.ಎಸ್. ಅವರು ಸಲ್ಲಿಸಿದ್ದ ಪರಿಹಾರ ಅರ್ಜಿಯನ್ನು ಸಮಿತಿ ಪರಿಶೀಲಿಸಿತು. ಪೊಲೀಸ್ ಎಫ್ಐಆರ್, ಮರಣೋತ್ತರ ಪರೀಕ್ಷಾ ವರದಿ, ಮರಣ ಪ್ರಮಾಣಪತ್ರ, ವಂಶವೃಕ್ಷ, ಪಹಣಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ವರದಿ ಹಾಗೂ ಸ್ಥಳ ಪರಿಶೀಲನಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪ್ರಕರಣವು ಆಕಸ್ಮಿಕ ಮರಣ ಪರಿಹಾರಕ್ಕೆ ಅರ್ಹವೆಂದು ಸಮಿತಿ ಪರಿಗಣಿಸಿತು.
ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ
ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಪಾವತಿಸುವಂತೆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ನಿಗದಿತ ಮಾರ್ಗದಲ್ಲಿ ಸಲ್ಲಿಸಲು ಸಮಿತಿ ನಿರ್ಧರಿಸಿದೆ.
ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು.ಎಂ., ವೈದ್ಯಾಧಿಕಾರಿಗಳಾದ ಡಾ. ರಮೇಶ್ ಮತ್ತು ಡಾ. ನಂದಕುಮಾರ್, ಪೊಲೀಸ್ ಉಪನಿರೀಕ್ಷಕರಾದ ಶರತ್ ಮತ್ತು ಪ್ರಸನ್ನ, ಕೃಷಿ ಅಧಿಕಾರಿ ಕೇಶವಮೂರ್ತಿ, ತಾಂತ್ರಿಕ ವ್ಯವಸ್ಥಾಪಕ ಶ್ರವಣ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಸಂತ್ರಸ್ತ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
PublicNext
30/10/2026 12:20 pm