ಕೊಪ್ಪಳ : ಕಳ್ಳತನಕ್ಕೆಂದು ಬಟ್ಟೆ ಅಂಗಡಿಗೆ ನುಗ್ಗಿದ ಇಬ್ಬರು ಖದೀಮರು, ಕುಡಿದ ಅಮಲಿನಲ್ಲಿ ಬಟ್ಟೆಗಳನ್ನು ಎಳೆದು ಧರಿಸಿ, ಅಂಗಡಿಯೊಳಗೇ ಬಚ್ಚಿಟ್ಟುಕೊಂಡಿರುವ ವಿಚಿತ್ರ ಘಟನೆ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊಸನಿಂಗಾಪುರ ಚರ್ಚ್ ಎದುರಿನ ಇಜಾರಿ ಟೆಕ್ಸ್ಟೈಲ್ಸ್ ಅಂಗಡಿಯಲ್ಲಿ ಇಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಅಂಗಡಿಯ ಹಿಂಬಾಗಿಲಿನಿಂದ ಒಳನುಗ್ಗಿದ ಖದೀಮರು, ಮದ್ಯದ ಅಮಲಿನಲ್ಲಿ ಬಟ್ಟೆಗಳನ್ನು ಎಳೆದಾಡಿ, ವಿವಿಧ ಉಡುಪುಗಳನ್ನು ಧರಿಸಿ ಅಂಗಡಿಯೊಳಗೆ ಅವಿತುಕೊಂಡಿದ್ದರು.
ಈ ವೇಳೆ ಅಂಗಡಿಯಲ್ಲೇ ಇದ್ದ ಮಾಲೀಕ ಸುನಿಲ್ ಇಜಾರಿ ಅವರಿಗೆ ಒಳಗಿನಿಂದ ಸದ್ದು ಕೇಳಿಸಿದೆ. ಪರಿಶೀಲನೆ ನಡೆಸಿದಾಗ ಶರ್ಟ್, ಪ್ಯಾಂಟ್‌ಗಳ ನಡುವೆ ಬಚ್ಚಿಟ್ಟುಕೊಂಡಿದ್ದ ಕಳ್ಳನೊಬ್ಬ ಕಾಣಿಸಿಕೊಂಡಿದ್ದಾನೆ. ತಕ್ಷಣ ಆತನ ಕಾಲರ್ ಹಿಡಿದು ಹೊರಗೆ ಎಳೆದಿದ್ದಾರೆ. ಆದರೆ, ಮಾಲೀಕನನ್ನೇ ದೂಡಿ, 'ನಮಸ್ತೆ' ಹೇಳುತ್ತಾ ಖದೀಮ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕಳ್ಳರ ಈ ವಿಚಿತ್ರ ವರ್ತನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿಂದೆಯೂ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು ಎಂದು ಮಾಲೀಕರು ತಿಳಿಸಿದ್ದಾರೆ. ಘಟನೆ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
30/10/2026 01:13 pm
LOADING...