ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಪ್ರೀತಿಸಿ ಲಿವ್‌ಇನ್‌ನಲ್ಲಿದ್ದು ಮದುವೆಗೆ ನಿರಾಕರಿಸಿದ ಯುವಕ

ಗಂಗಾವತಿ: ಮದುವೆಯಾಗುವುದಾಗಿ ನಂಬಿಸಿ ಒಂದು ವರ್ಷ ಪ್ರೀತಿಸಿ, ಲಿವ್‌ಇನ್ ಸಂಬಂಧದಲ್ಲಿದ್ದ ಯುವಕ ಇದೀಗ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿ ಬೀದರ್ ಮೂಲದ ಯುವತಿಯೊಬ್ಬಳು ಗಂಗಾವತಿಗೆ ಆಗಮಿಸಿರುವ ಘಟನೆ ನಡೆದಿದೆ.

ಬೀದರ್ ಮೂಲದ ಮಮತಾ (ಹೆಸರು ಬದಲಿಸಲಾಗಿದೆ) ಬೆಂಗಳೂರಿನಲ್ಲಿ ಬಿಬಿಎ ಪದವಿ ಪಡೆದಿದ್ದು, ಸ್ನೇಹಿತರ ಮೂಲಕ ಗಂಗಾವತಿ ಮೂಲದ ವಾರೇಶ (ಹೆಸರು ಬದಲಿಸಲಾಗಿದೆ) ಎಂಬ ಯುವಕನ ಪರಿಚಯವಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ, ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ.

ನಂತರ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, ಇಬ್ಬರೂ ಸುಮಾರು ಒಂದು ವರ್ಷ ಲಿವ್‌ಇನ್ ಸಂಬಂಧದಲ್ಲಿದ್ದರು. ಈ ಅವಧಿಯಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಯುವಕ, ಇದೀಗ ಮದುವೆಗೆ ನಿರಾಕರಿಸಿ ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಯುವತಿಯೊಂದಿಗೆ ಹಲವು ಕಡೆ ಸುತ್ತಾಡಿದ್ದ ಯುವಕ, ಆಕೆಯ ಮನೆಗೂ ಭೇಟಿ ನೀಡಿದ್ದಲ್ಲದೆ ಕುಟುಂಬದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದ ಎನ್ನಲಾಗಿದೆ. ಯುವತಿಯ ಸ್ನೇಹಿತರು ಹಾಗೂ ಕುಟುಂಬಸ್ಥರ ಎದುರು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅಲ್ಲದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೂ ಕರೆದೊಯ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಯುವತಿ ದೂರಿದ್ದಾಳೆ.

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಆರೋಪಿಸಿರುವ ಯುವತಿ, ಇದೀಗ ಯುವಕನನ್ನು ಹುಡುಕಿಕೊಂಡು ಗಂಗಾವತಿಗೆ ಬಂದಿದ್ದಾಳೆ. ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿರುವ ಆಕೆ, ತನಗೆ ನ್ಯಾಯ ಕೊಡಿಸುವಂತೆ ಸ್ಥಳೀಯ ಸಂಘಟನೆಗಳ ಬೆಂಬಲವನ್ನೂ ಕೋರಿದ್ದಾಳೆ.

Edited By : Somashekar
PublicNext

PublicNext

04/11/2026 11:07 pm

Cinque Terre

8.97 K

Cinque Terre

7

ಸಂಬಂಧಿತ ಸುದ್ದಿ