ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜನಿಯಲ್ಲಿ ಮನೆಗಳ್ಳತನ ಮಾಡಿದ ಮೂವರು ಆರೋಪಿಗಳ ಬಂಧನ

ಸಿದ್ದಾಪುರ: ತಾಲೂಕಿನ ಹೆಜನಿ ಗ್ರಾಮದ ಬರೆಗುಡ್ಡೆಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಭೇದಿಸಿರುವ ಸಿದ್ದಾಪುರ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹6.34 ಲಕ್ಷ ಮೌಲ್ಯದ 56 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಹೆಜನಿ ಗ್ರಾಮದ ಬರೆಗುಡ್ಡೆಯ ನಿವಾಸಿ ನೀಲಕಂಠ ಕನ್ನ ನಾಯ್ಕ (39) ಅವರ ಮನೆಯಲ್ಲಿ ಅ. 28ರಂದು ಮಧ್ಯಾಹ್ನ 2ರಿಂದ 2.30ರ ಅವಧಿಯಲ್ಲಿ ಕಳ್ಳತನ ನಡೆದಿತ್ತು. ಹಳದಿ ಬಣ್ಣದ ಬೈಕ್‌ನಲ್ಲಿ ಬಂದಿದ್ದ ಮೂವರು ಕಳ್ಳರು ಮನೆಯ ಹಿಂಭಾಗದ ಗೋಡೆ ಹತ್ತಿ ಒಳನುಗ್ಗಿ, ಹಾಲ್‌ನಲ್ಲಿದ್ದ ಗೋದ್ರೇಜ್ ಕಪಾಟನ್ನು ಮೀಟಿ ತೆರೆದಿದ್ದರು.

ಬಳಿಕ ಅದರೊಳಗಿದ್ದ ಸೇಫ್ ಲಾಕರ್‌ನ ಚಾವಿ ಬಳಸಿ ಲಾಕರ್ ತೆರೆದು 35 ಗ್ರಾಂ ತೂಕದ ಬಂಗಾರದ ತಾಳಿ ಸರ, 16 ಗ್ರಾಂ ತೂಕದ ಬಂಗಾರದ ಸರ, 5 ಗ್ರಾಂ ತೂಕದ ಬಂಗಾರದ ಕಿವಿಯೋಲೆಗಳ ಲಾಕೆಟ್ ಹಾಗೂ ₹4 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದರು.

ಈ ಕುರಿತು ನೀಲಕಂಠ ನಾಯ್ಕ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಬಿ. ಸೀತಾರಾಮ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದ ಸಿದ್ದಲಿಂಗ ಎನ್. (29), ಕಿರಣ (26) ಹಾಗೂ ವಿಜಯ ಎನ್. (30) ಅವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ್ದ ಒಟ್ಟು 56 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಅಂದಾಜು ₹20 ಸಾವಿರ ಮೌಲ್ಯದ ಬಜಾಜ್ ಅಪಾಚೆ ಬೈಕ್‌ನ್ನೂ ಜಪ್ತಿ ಮಾಡಲಾಗಿದೆ.

ಬಂಧಿತರು ರೂಢಿಗತ ಅಪರಾಧಿಗಳಾಗಿದ್ದು, ಕೊಡಗು, ಶಿವಮೊಗ್ಗ, ಉಡುಪಿ, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದಿರುವ ವಿವಿಧ ಮನೆಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇತರ ಪ್ರಕರಣಗಳಲ್ಲಿನ ಅವರ ಪಾತ್ರದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Edited By : PublicNext Desk
Kshetra Samachara

Kshetra Samachara

30/10/2026 07:24 pm

Cinque Terre

2.38 K

Cinque Terre

0

ಸಂಬಂಧಿತ ಸುದ್ದಿ