ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ : ಮಹಿಳೆಗೆ ಕಿರುಕುಳ ನೀಡಿ ಖಾಸಗಿ ವಿಡಿಯೋ ಮೂಲಕ ಬೆದರಿಕೆ: ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ, ₹5 ಸಾವಿರ ದಂಡ

ಭಟ್ಕಳ : ಮಹಿಳೆಗೆ ಕಿರುಕುಳ ನೀಡಿ, ಆಕೆಯ ಖಾಸಗಿ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2023ರ ನವೆಂಬರ್ 13ರಂದು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯಾದ ಆಂಥೋನಿ (30), ತಂದೆ ಜೋಸೆಫ್, ತೆನೆಮಕ್ಕಿ ನಿವಾಸಿ ಎಂಬಾತ ಮಹಿಳೆಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದ ಸಂದರ್ಭದಲ್ಲಿ ಆಕೆಯ ಖಾಸಗಿ ವಿಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಂಗ್ರಹಿಸಿಕೊಂಡಿದ್ದನು.

ನಂತರ ಮಹಿಳೆಯು ಆತನಿಂದ ದೂರವಾಗಲು ಪ್ರಯತ್ನಿಸಿದಾಗ, ಆರೋಪಿಯು ಆಕೆಗೆ ಕಿರುಕುಳ ನೀಡುವುದರ ಜೊತೆಗೆ ಖಾಸಗಿ ವಿಡಿಯೋಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬೆದರಿಕೆ ಹಾಕಿದ್ದನು. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 97/2023ರ ಅಡಿಯಲ್ಲಿ ಐಪಿಸಿ ಕಲಂ 354(ಎ), 354(ಡಿ), 509 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಕಲಂ 67ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಭಟ್ಕಳದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ರೂಪಶ್ರೀ ಅವರು ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಪುಟ್ಟಲಕ್ಷ್ಮಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Edited By : PublicNext Desk
PublicNext

PublicNext

04/11/2026 07:30 am

Cinque Terre

3.2 K

Cinque Terre

0

ಸಂಬಂಧಿತ ಸುದ್ದಿ