ಭಟ್ಕಳ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕವೂ ಗುಳ್ಳಿಕ್ರಾಸ್ನಲ್ಲಿ ಅಪಘಾತದ ಭೀತಿ ದೂರವಾಗಿಲ್ಲ. ಕಳೆದ ಶನಿವಾರ ರಾತ್ರಿ ಲಾರಿ ಡಿಕ್ಕಿಯಿಂದ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಹೆದ್ದಾರಿಯಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಗುಳ್ಳಿಕ್ರಾಸ್ನಲ್ಲಿ ನವೀಕರಣಗೊಂಡ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಸಂಪರ್ಕ ರಸ್ತೆಗಳಿಗೆ ಹೋಲಿಸಿದರೆ ಎತ್ತರದಲ್ಲಿರುವುದು ವಾಹನ ಸವಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಒಳರಸ್ತೆಗಳಿಂದ ಹೆದ್ದಾರಿಗೆ ಬರುವ ವಾಹನಗಳು ಮುಖ್ಯ ರಸ್ತೆಯಲ್ಲಿನ ವಾಹನಗಳ ಸಂಚಾರವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ ಅಪಾಯ ಎದುರಿಸುವಂತಾಗಿದೆ. ಅದರಲ್ಲೂ ವೇಗವಾಗಿ ಬರುವ ವಾಹನಗಳ ನಡುವೆ ಹೆದ್ದಾರಿಗೆ ಪ್ರವೇಶಿಸುವುದು ಸವಾರರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು.
ಹೆದ್ದಾರಿಯಲ್ಲಿ ಅಗತ್ಯ ಎಚ್ಚರಿಕೆ ಫಲಕಗಳಿಲ್ಲದಿರುವುದು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಅಪಘಾತಗಳಿಗೆ ಮತ್ತಷ್ಟು ಕಾರಣವಾಗುತ್ತಿದೆ. ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರ ಜತೆಗೆ ಬೀದಿ ದೀಪಗಳು ಹಾಗೂ ಅಗತ್ಯ ಸುರಕ್ಷತಾ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಎರಡು ಪ್ರಮುಖ ಸಂಪರ್ಕ ರಸ್ತೆಗಳು; ಪಾದಚಾರಿಗಳಿಗೂ ಸಂಕಷ್ಟ
ಗುಳ್ಳಿಕ್ರಾಸ್ನಿಂದ ಒಂದು ರಸ್ತೆ ರೈಲ್ವೆ ನಿಲ್ದಾಣದ ಕಡೆಗೆ ಹಾಗೂ ಮತ್ತೊಂದು ರಸ್ತೆ ಹಳೆ ಬಸ್ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಗಳ ಮೂಲಕ ಪ್ರತಿನಿತ್ಯ ಅಪಾರ ಸಂಖ್ಯೆಯ ಜನರು ಸಂಚರಿಸುತ್ತಾರೆ.
ರೈಲ್ವೆ ನಿಲ್ದಾಣದ ರಸ್ತೆಯ ಸಮೀಪದಲ್ಲಿಯೇ ಪಶು ಆಸ್ಪತ್ರೆ, ಗಿರಿಜನರ ಸಹಕಾರಿ ಸಂಘ, ಅಂಗನವಾಡಿ ಕೇಂದ್ರ, ಮಸೀದಿ, ಮದರಸಾ ಹಾಗೂ ಸ್ಮಶಾನವಿದೆ. ಇನ್ನೊಂದೆಡೆ ಹಳೆ ಬಸ್ ನಿಲ್ದಾಣದ ರಸ್ತೆಯ ಮೂಲಕ ಗೋಪಾಲಕೃಷ್ಣ ದೇವಸ್ಥಾನ ಸೇರಿದಂತೆ ವಿವಿಧ ಪ್ರದೇಶಗಳಿಗೆ ಜನರು ತೆರಳುತ್ತಾರೆ.
ವಿದ್ಯಾರ್ಥಿಗಳು, ಕಾರ್ಮಿಕರು, ಸ್ಥಳೀಯ ನಿವಾಸಿಗಳು ಸೇರಿದಂತೆ ಸಾವಿರಾರು ಜನರು ಪ್ರತಿನಿತ್ಯ ಈ ಮಾರ್ಗಗಳನ್ನು ಬಳಸುತ್ತಿದ್ದು, ಹೆದ್ದಾರಿ ದಾಟುವ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ವಾಹನಗಳ ದಟ್ಟಣೆ ಹೆಚ್ಚಿರುವ ಈ ಪ್ರದೇಶದಲ್ಲಿ ಪಾದಚಾರಿಗಳ ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಹೀಗಾಗಿ ಗುಳ್ಳಿಕ್ರಾಸ್ನಲ್ಲಿ ಅಂಡರ್ಪಾಸ್ ನಿರ್ಮಾಣ ಮಾಡುವ ಮೂಲಕ ಜನರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟರು.
ಅಂಡರ್ಪಾಸ್ ಬೇಡಿಕೆಗೆ ಪ್ರಾಧಿಕಾರದ ಗಮನ
ಸ್ಥಳೀಯರ ಅಹವಾಲುಗಳನ್ನು ಆಲಿಸಿದ ಯೋಜನಾ ನಿರ್ದೇಶಕ ಶಿವಕುಮಾರ, ಗುಳ್ಳಿಕ್ರಾಸ್ನ ಅಪಘಾತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಅಪಘಾತಗಳ ನಿಯಂತ್ರಣಕ್ಕಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ವೇಗ ನಿಯಂತ್ರಕ ಹಾಗೂ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಈ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಂಡರ್ಪಾಸ್ ನಿರ್ಮಾಣದ ಬೇಡಿಕೆಯ ಬಗ್ಗೆಯೂ ಪರಿಶೀಲನೆ ನಡೆಸಿ, ಅದರ ಅಗತ್ಯತೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಂ ಜಮಾಅತ್ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಸತೀಶಕುಮಾರ, ಅಝೀಜುರ್ ರೆಹಮಾನ್, ಸಲೀಮ್ ಗುಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಡಿವೈಎಸ್ಪಿ ಗಿರೀಶ್, ಸಿಪಿಐ ದಿವಾಕರ ಹಾಗೂ ಪಿಎಸ್ಐ ನವೀನ್ ಕೂಡ ಹಾಜರಿದ್ದರು.
Kshetra Samachara
04/11/2026 08:40 pm