ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಲಸೆ ಮಕ್ಕಳ ಬಾಯಲ್ಲಿ ಅಚ್ಚಗನ್ನಡ ನುಡಿ- ಕನ್ನಡದ ಕಂಪು ಪಸರಿಸಿದ ಬೆಂಗ್ರೆ ಸರಕಾರಿ ಶಾಲೆ

ಮಂಗಳೂರು: ಹೊಟ್ಟೆಪಾಡಿಗಾಗಿ ಊರಿಂದೂರಿಗೆ ವಲಸೆ ಕಾರ್ಮಿಕರು ಬರುವುದು ಸಾಮಾನ್ಯ. ಹೀಗೆ ಬರುವ ಅವರು ತಮ್ಮೊಂದಿಗೆ ಸಂಸಾರವನ್ನೂ ಕಟ್ಟಿಕೊಂಡು ಬರುತ್ತಾರೆ. ಹೀಗೆ ಬಂದ ಹೊರರಾಜ್ಯದ ಪುಟಾಣಿ ಮಕ್ಕಳಿಗೆ ಕನ್ನಡ ಕಲಿಸಿದ್ದು ಬೆಂಗ್ರೆಯ ಸ್ಯಾಂಡ್ಸ್‌ಪಿಟ್ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ. ಮನೆಯಲ್ಲಿ ಹಿಂದಿ, ಭೋಜಪುರಿ, ಬಂಗಾಳಿ, ಬಿಹಾರಿ, ತೆಲುಗು ಮಾತನಾಡುವ ಪುಟಾಣಿಗಳು ಇದೀಗ ಅಚ್ಚಗನ್ನಡದ ಕಂಪು ಪಸರಿಸುತ್ತಿದ್ದಾರೆ.

ಹೌದು‌.. ಇಲ್ಲಿರುವವರು ಉತ್ತರ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಜಾರ್ಖಂಡ್, ಆಂಧ್ರಪ್ರದೇಶ ಮೂಲದ ಮಕ್ಕಳು. ವಲಸೆ ಕಾರ್ಮಿಕರ ಮಕ್ಕಳಾದ ಇವರು, ಮಂಗಳೂರಿನ ದ್ವೀಪ ಪ್ರದೇಶ ಬೆಂಗ್ರೆಯ ನಿವಾಸಿಗಳು. ಇವರ ಹೆತ್ತವರಲ್ಲಿ ಹೆಚ್ಚಿನವರು ಮೀನುಗಾರಿಕಾ ಬಂದರಿನಲ್ಲಿ ಕೂಲಿ ಕಾರ್ಮಿಕರು‌. ಆದರೆ ಶಿಕ್ಷಣಕ್ಕಾಗಿ ಇವರ ಮಕ್ಕಳು ಕನ್ನಡ ಶಾಲೆಯನ್ನೇ ಅವಲಂಬಿಸಿದ್ದಾರೆ. ಬೆಂಗ್ರೆ ಶಾಲೆಯ ಶಿಕ್ಷಕಿಯರ ಪರಿಶ್ರಮದಿಂದ ಈ ಮಕ್ಕಳು ಅಚ್ಚಕನ್ನಡದಲ್ಲಿ ಮಾತನಾಡುತ್ತಾರೆ, ಬರೆಯುತ್ತಾರೆ. ಮೊದಮೊದಲು ಕನ್ನಡ ಓದು ಬರಹ ಕಲಿಸುವುದು ಕಷ್ಟವಾದರೂ ಶಿಕ್ಷಕಿಯರ ಸತತ ಪ್ರಯತ್ನದಿಂದ ಸದ್ಯ ಈ ಮಕ್ಕಳು ಕನ್ನಡಿಗರಲ್ಲ ಎಂದು ನಂಬಲಾಗದಷ್ಟು ಸೊಗಸಾಗಿ ಕನ್ನಡ ಮಾತನಾಡುತ್ತಾರೆ, ಬರೆಯುತ್ತಾರೆ.

ಒಂದರಿಂದ ಏಳನೇ ತರಗತಿಯಿರುವ ಈ ಶಾಲೆಯಲ್ಲಿ ಸದ್ಯ 80ರಷ್ಟು ವಿದ್ಯಾರ್ಥಿಗಳಿದ್ದು, ಅವರಲ್ಲಿ 30ರಷ್ಟು ವಿದ್ಯಾರ್ಥಿಗಳು ವಲಸೆ ಕಾರ್ಮಿಕರ ಮಕ್ಕಳು. ತಮ್ಮ ಹೆತ್ತವರಿಗೆ ಈಗಲೂ ಸರಿಯಾಗಿ ಕನ್ನಡ ಮಾತನಾಡಲು ಬಾರದಿದ್ದರೂ ಈ ಮಕ್ಕಳು ಮಾತ್ರ ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಕನ್ನಡದಲ್ಲಿ ಬರೆಯುತ್ತಾರೆ. ಕನ್ನಡದ ಪದ್ಯ, ನಾಡಗೀತೆ ಹಾಡುತ್ತಾರೆ. ರಸವತ್ತಾಗಿ ನಾಟಕಗಳನ್ನಾಡುತ್ತಾರೆ. ಭಾಷೆಯ ಗಡಿ ದಾಟಿದ ಈ ಕನ್ನಡ ಭಾಷಾ ಪ್ರೇಮ, ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೊಂದು ಮೆರುಗು ತಂದಿದೆ.

Edited By :
PublicNext

PublicNext

01/11/2026 02:20 pm

Cinque Terre

6.15 K

Cinque Terre

0

ಸಂಬಂಧಿತ ಸುದ್ದಿ