ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 12 ದಿನ.. 12 ಗಂಟೆ.. 12 ನಿಮಿಷ.. ಸಾವಿರಾರು ಕಂಠಗಳಲ್ಲಿ ಗಾನಯಾನ- ಗಿನ್ನೆಸ್ ದಾಖಲೆಯತ್ತ ಕೊಂಕಣಿ ಸಂಗೀತ!

ಮಂಗಳೂರು: ಒಂದೇ ಭಾಷೆ.. ಸಾವಿರಾರು ಕಂಠಗಳು.. ಹಾಡುಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಮಂಗಳೂರು! ಕೊಂಕಣಿ ಭಾಷೆಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ ಮಾಂಡ್ ಸೊಭಾಣ್. ಬರೋಬ್ಬರಿ 300 ಗಂಟೆ 12 ನಿಮಿಷಗಳ ಕಾಲ, ಒಂದೇ ಒಂದು ಹಾಡಿನ ಪುನರಾವರ್ತನೆಯೂ ಇಲ್ಲದೆ ನಡೆಯಲಿದೆ ನಿರಂತರ ಸಮೂಹ ಗಾಯನ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಧರ್ಮದ ಭೇದವಿಲ್ಲದೆ ಸಾವಿರಾರು ಗಾಯಕರ ಸಂಗಮ. ಗಿನ್ನೆಸ್ ವಿಶ್ವ ದಾಖಲೆಯತ್ತ ಸಾಗುತ್ತಿರುವ ಈ ಐತಿಹಾಸಿಕ ಸಂಗೀತ ಸಾಧನೆಯ ವಿಶೇಷ ವರದಿ ಇಲ್ಲಿದೆ.

ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಿರುವ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ ಇದೀಗ ಜಾಗತಿಕ ಗಮನ ಸೆಳೆಯುತ್ತಿದೆ. ನ.3ರಂದು ಬೆಳ್ಳಂಬೆಳಗ್ಗೆ 5 ಗಂಟೆಗೆ ಆರಂಭಗೊಂಡು ನ.15ರ ಸಂಜೆಯವರೆಗೆ 12 ದಿನ, 12 ಗಂಟೆ, 12 ನಿಮಿಷಗಳ ಈ ಸಂಗೀತ ಯಜ್ಞದಲ್ಲಿ 6,789ಕ್ಕೂ ಅಧಿಕ ಗಾಯಕರು, 4,500ಕ್ಕೂ ಹೆಚ್ಚು ವಿಭಿನ್ನ ಹಾಡುಗಳ ಮೂಲಕ ಕೊಂಕಣಿ ಭಾಷೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಒಂದೇ ಒಂದು ಹಾಡು ಪುನರಾವರ್ತನೆಯಾಗದಂತೆ ಕಾರ್ಯಕ್ರಮ ರೂಪಿಸಿರುವುದು ಈ ಪ್ರಯತ್ನದ ವಿಶೇಷ.

300 ಗಾಯನ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 18ರಿಂದ 25 ಮಂದಿ ಗಾಯಕರಿದ್ದು, ಒಂದೊಂದು ತಂಡಕ್ಕೆ ಒಂದು ಗಂಟೆಯ ಅವಧಿ ನೀಡಲಾಗಿದೆ. ಮಂಗಳೂರು, ಉಡುಪಿ, ಮಲೆನಾಡು, ಬೆಂಗಳೂರು ಹಾಗೂ ಗೋವಾದ 53 ತಂಡಗಳ ಜೊತೆಗೆ ಮಹಾರಾಷ್ಟ್ರ ಮತ್ತು ಆಸ್ಟ್ರೇಲಿಯಾ, ಕುವೈತ್, ಮಸ್ಕತ್, ಕತಾರ್ ಸೇರಿದಂತೆ ವಿದೇಶಗಳಿಂದಲೂ ಕಲಾವಿದರು ಆಗಮಿಸಿದ್ದಾರೆ. ಸುಗಮ ಸಂಗೀತ, ಭಕ್ತಿಗೀತೆ, ಜಾನಪದ ಹಾಡುಗಳು, ವೋವಿಯೊ ಮತ್ತು ವೇರ್ಸ್ ಸೇರಿದಂತೆ ಕೊಂಕಣಿ ಸಂಗೀತದ ವಿವಿಧ ಪ್ರಕಾರಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಗೌಡ ಸಾರಸ್ವತ ಬ್ರಾಹ್ಮಣರು, ರಾಜಾಪುರ ಸಾರಸ್ವತ ಬ್ರಾಹ್ಮಣರು, ಕುಡಾಲ್ ದೇಶಸ್ಥರು, ಕೊಂಕಣಿ ಕ್ರೈಸ್ತರು, ಸಿರಿಯನ್ ಆರ್ಥೊಡಾಕ್ಸ್ ಕ್ರೈಸ್ತರು, ಖಾರ್ವಿಗಳು, ಕುಡ್ಮಿಗಳು, ಸಿದ್ಧಿ ಜನಾಂಗದವರು, ನವಾಯತ್ ಮತ್ತು ದಾಲ್ದಿ ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಕಲಾವಿದರು ಈ ಗಾನಯಾನದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಆಚಾರ-ವಿಚಾರಗಳು ಹಾಗೂ ಉಪಭಾಷೆಗಳಲ್ಲಿ ಭಿನ್ನತೆ ಇದ್ದರೂ, ಕೊಂಕಣಿ ಭಾಷೆ ಎಲ್ಲರನ್ನೂ ಒಂದಾಗಿಸುವ ಕೊಂಡಿಯಾಗಿ ಭಾಷಾ ಸಾಮರಸ್ಯದ ಮಾದರಿಯಾಗಿ ಮೂಡಿಬಂದಿದೆ.

Edited By :
PublicNext

PublicNext

05/11/2026 10:38 am

Cinque Terre

2.06 K

Cinque Terre

0

ಸಂಬಂಧಿತ ಸುದ್ದಿ