ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕಣಚೂರು ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ; ಜೂನಿಯರ್‌ಗಳಿಗೆ ಕಿರುಕುಳ, ಕೊಲೆ ಬೆದರಿಕೆ

ಮಂಗಳೂರು : ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಜೂನಿಯರ್ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಹೆಸರಿನಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ ಬಲವಂತವಾಗಿ ಹಾಡಿಸುವುದು, ವಿಡಿಯೋ ಚಿತ್ರೀಕರಿಸಿ ಹಂಚಿಕೊಳ್ಳುವುದು ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಸೀನಿಯರ್ ವಿದ್ಯಾರ್ಥಿಗಳಾದ ಅಶಬ್, ಅಶ್ಫಕ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಮೂಲದ ವಿದ್ಯಾರ್ಥಿಯೊಬ್ಬ ಕಣಚೂರು ಕಾಲೇಜಿನಲ್ಲಿ ಬಿ.ಎಸ್ಸಿ. ನ್ಯೂರೋಸೈನ್ಸ್ ಟೆಕ್ನಾಲಜಿ ಕೋರ್ಸ್‌ನ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾದ ಅಶಬ್ ಮತ್ತು ಅಶ್ಫಕ್ ನಿರಂತರವಾಗಿ ರ‍್ಯಾಗಿಂಗ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆತ ದೂರಿನಲ್ಲಿ ಆರೋಪಿಸಿದ್ದಾನೆ.

ಅಕ್ಟೋಬರ್ 2ರಂದು ಸಂತ್ರಸ್ತ ವಿದ್ಯಾರ್ಥಿ ಕಿಚನ್ ರೆಸ್ಟೋರೆಂಟ್ ಒಂದರ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಅಶ್ಫಕ್, ಕ್ಯಾಂಪಸ್‌ನ ಹೊರಗಡೆ ಯೂನಿಫಾರ್ಮ್ ಧರಿಸದೆ ತಿರುಗಾಡಿದರೆ ಕೈಕಾಲು ಮುರಿದು ಕಾಲೇಜಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಅವಾಚ್ಯವಾಗಿ ನಿಂದಿಸಿ ರ‍್ಯಾಗಿಂಗ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 15ರಂದು ಅಕ್ಷಯ್ ಹಾಗೂ ಆತನ ಸ್ನೇಹಿತರಾದ ಝಾಹಿದ್, ಶಹಜಾದ್, ಹುಸೈನ್, ರೋವನ್, ಅಲ್ಫಾಝ್ ಮತ್ತು ಆದಿರ್ ಅವರೊಂದಿಗೆ ಊಟಕ್ಕೆ ತೆರಳುತ್ತಿದ್ದಾಗ ಅಶಬ್ ಪದೇಪದೇ ಕರೆ ಮಾಡಿ ಕ್ಲಾಕ್ ಟವರ್ ಬಳಿ ಬರುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ. ಬಳಿಕ ಎಲ್ಲರನ್ನೂ ಸಮೀಪದ ಶ್ರೀದೇವಿ ಪ್ರಸಾದ್ ಹೋಟೆಲ್‌ನ ಕೊಠಡಿಗೆ ಕರೆದೊಯ್ದು ಕೂಡಿಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಹಾಡು ಹಾಡದಿದ್ದರೆ ಕೊಠಡಿಯಿಂದ ಹೊರಗೆ ಬಿಡುವುದಿಲ್ಲ ಎಂದು ಬೆದರಿಸಿ, ಬಲವಂತವಾಗಿ ಹಾಡಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತರರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 22ರಂದು ಜೂನಿಯರ್ ವಿದ್ಯಾರ್ಥಿ ಅಲ್ಫಾಝ್‌ನನ್ನು ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ದ ಅಶಬ್ ಹಾಗೂ ಮತ್ತೊಬ್ಬ ವಿದ್ಯಾರ್ಥಿ, ಝಾಹಿದ್‌ನ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ ಎನ್ನಲಾಗಿದೆ. ಅಲ್ಲಿ ಅಲ್ಫಾಝ್‌ಗೆ ಬೆಂಕಿಪೊಟ್ಟಣ ನೀಡಿ ಕೊಠಡಿಯನ್ನು ಅಳೆಯುವಂತೆ ಮಾಡಿದ್ದಲ್ಲದೆ, ಕೋಳಿ ಮೊಟ್ಟೆ ಇಡುವಂತೆ ಹೇಳಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ಮುಂದೆ ಪ್ರತಿದಿನ ಒಬ್ಬೊಬ್ಬ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೈಕಾಲು ಮುರಿದು ಕಬರಸ್ಥಾನಕ್ಕೆ ಕಳುಹಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸತತ ರ‍್ಯಾಗಿಂಗ್ ಹಾಗೂ ಬೆದರಿಕೆಗಳಿಂದ ಭಯಭೀತರಾದ ವಿದ್ಯಾರ್ಥಿಗಳು ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಗಳ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Edited By :
PublicNext

PublicNext

27/10/2026 11:00 am

Cinque Terre

6.91 K

Cinque Terre

0

ಸಂಬಂಧಿತ ಸುದ್ದಿ