ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಹಾಗೂ ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಬುಧವಾರ ಸಂಜೆ ಸುಮಾರು ಆರು ಗಂಟೆಯ ವೇಳೆಗೆ ಔರಂ ಹೋಟೆಲ್ ಎದುರಿನ ಕುಮಾರಧಾರ ನದಿ ಕಡೆಯಿಂದ ಮಹಿಳೆಯ ಕಿರುಚಾಟ ಕೇಳಿಬಂದಿದೆ. ತಕ್ಷಣ ಎಚ್ಚೆತ್ತ ಹೋಟೆಲ್ ಸಿಬ್ಬಂದಿ ನದಿ ಕಡೆಗೆ ಗಮನ ಹರಿಸಿದಾಗ ಮಹಿಳೆಯೊಬ್ಬರು ಅಪಾಯದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ರಕ್ಷಿಸಲಾದ ಮಹಿಳೆ ಉಡುಪಿ ಮೂಲದವರೆಂದು ತಿಳಿದುಬಂದಿದೆ. ಮಹಿಳೆ ನದಿಗೆ ಇಳಿದಿದ್ದರ ಹಿಂದಿನ ಕಾರಣವೇನು? ಮೊಸಳೆ ದಾಳಿಯಾಗಿದೆ ಎಂಬ ವದಂತಿಯಲ್ಲಿ ಸತ್ಯಾಂಶವಿದೆಯೇ ಎಂಬ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.
ಘಟನೆಯ ಬಳಿಕ ಪೊಲೀಸರು ಮಹಿಳೆಯನ್ನು ತಮ್ಮ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಅಪಾಯದ ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಹೋಟೆಲ್ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ ಸ್ಥಳೀಯರ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
PublicNext
05/11/2026 11:00 am
LOADING...