ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಹೆಲಿಕಾಪ್ಟರ್ ದುರಂತದಲ್ಲಿ ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ ಸಾವು; ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ

ಅಥಣಿ : ಹೆಲಿಕಾಪ್ಟರ್ ದುರಂತದಲ್ಲಿ 44 ವರ್ಷದ ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ ದುರ್ಮರಣಕ್ಕೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಅರುಣ ಸಾಳುಂಕೆ (44) ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆದಿವೆ. ಅರುಣ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮಸ್ಥರು, ಅಭಿಮಾನಿಗಳು ಹಾಗೂ ಹಿತೈಷಿಗಳು ಅಂತಿಮ ದರ್ಶನ ಪಡೆದು ಕಂಬನಿ ಮಿಡಿಯುತ್ತಿದ್ದಾರೆ.

ಕೃಷಿ ಕುಟುಂಬದಲ್ಲಿ ಜನಿಸಿದ ಅರುಣ ಸಾಳುಂಕೆ ಅವರು 2007ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದರು. ವೃತ್ತಿಜೀವನದ ಆರಂಭದಲ್ಲಿ ದೆಹಲಿಯ ಗುಪ್ತಚರ ವಿಭಾಗದಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರಿಗೆ ವರ್ಗಾವಣೆಯಾಗಿ ನೆಲಮಂಗಲ, ಕುಣಿಗಲ್, ಬಾಣಸವಾಡಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಬೆಂಗಳೂರಿನ ಅಪರಾಧ ತನಿಖಾ ದಳ (ಸಿಸಿಬಿ) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಕುಟುಂಬದ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ದುಃಖ ಹೇಳತೀರದಾಗಿದೆ. ಪೊಲೀಸ್ ಅಧಿಕಾರಿಯ ಅಕಾಲಿಕ ಸಾವು ಅರಟಾಳ ಗ್ರಾಮದ ಜನರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಗ್ರಾಮಸ್ಥರು ಹಾಗೂ ಬಂಧು-ಬಳಗದವರು ಆಗಮಿಸುತ್ತಿದ್ದು, ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ.

Edited By :
PublicNext

PublicNext

02/11/2026 12:53 pm

Cinque Terre

6.12 K

Cinque Terre

0

ಸಂಬಂಧಿತ ಸುದ್ದಿ