ಅಥಣಿ : ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ಕುರಿಗಾಯಿಗಳಿಗೆ ಅಪರಿಚಿತ ವಾಹನ ಸವಾರನ ಅಜಾಗರೂಕತೆ ಬರಸಿಡಿಲಿನಂತೆ ಎರಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಲ್ಲೋತ್ತಿ ಗ್ರಾಮದ ಹೊರವಲಯದಲ್ಲಿ ಕುರಿಗಳ ಹಿಂಡಿನ ಮೇಲೆ ವೇಗವಾಗಿ ಬಂದ ಅಪರಿಚಿತ ವಾಹನ ಹರಿದ ಪರಿಣಾಮ ಏಳು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ಕುರಿಗಳು ಗಾಯಗೊಂಡಿವೆ.
ಸಂಜೆ ವೇಳೆ ಕುರಿಗಳನ್ನು ಮೇಯಿಸಿಕೊಂಡು ದಡ್ಡಿಗೆ ಮರಳುತ್ತಿದ್ದಾಗ, ಮಾರ್ಗಮಧ್ಯೆ ಏಕಾಏಕಿ ಬಂದ ವಾಹನ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಅಪಘಾತ ಸಂಭವಿಸಿದ ಕೂಡಲೇ ವಾಹನ ನಿಲ್ಲಿಸದೆ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಪರಿಣಾಮ, ಏಳು ಕುರಿಗಳು ರಸ್ತೆಯಲ್ಲೇ ಪ್ರಾಣಬಿಟ್ಟಿದ್ದು, ಗಾಯಗೊಂಡ ಮೂರು ಕುರಿಗಳು ನರಳಾಡುವಂತಾಗಿದೆ.
ಕುರಿಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಕುರಿಗಾಯಿಗಳ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತ ನೀಡಿದೆ. ಜೀವನೋಪಾಯಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡು ಕುರಿಗಾಯಿಗಳು ಕಣ್ಣೀರಿಡುವಂತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಎಸಗಿ ಪರಾರಿಯಾದ ವಾಹನ ಹಾಗೂ ಚಾಲಕನ ಪತ್ತೆಗೆ ಮುಂದಾಗಿದ್ದಾರೆ. ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
PublicNext
05/11/2026 01:17 pm
LOADING...