ಚಿಕ್ಕೋಡಿ: ಒಂದೆಡೆ ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಅನಿರೀಕ್ಷಿತ ಅಗ್ನಿ ಅವಘಡದಿಂದ ರೈತರ ಕೈಗೆ ಬಂದ ಕಬ್ಬು ಬೆಂಕಿಗಾಹುತಿಯಾಗಿರುವ ಭೀಕರ ಘಟನೆ ನಿನ್ನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಒಟ್ಟು ೧೧ ಜನ ರೈತರಿಗೆ ಸೇರಿದ ಬರೋಬ್ಬರಿ ೫೦ ಎಕರೆಗೂ ಹೆಚ್ಚು ಬೆಳೆದ ಕಬ್ಬು ಸಂಪೂರ್ಣವಾಗಿ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸಾಲ ಸೋಲ ಮಾಡಿ ಬೆಳೆದ ಬೆಳೆಗೆ ಬೆಂಕಿ
ಈಗಾಗಲೇ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದ್ದ ಈ ಭಾಗದ ರೈತರು, ಕಷ್ಟಪಟ್ಟು ಸಾಲ-ಸೋಲ ಮಾಡಿ ನೀರು ಹಾಯಿಸಿ ಕಬ್ಬನ್ನು ಬೆಳೆಸಿದ್ದರು. ಕೊಯ್ಲಿಗೆ ಬಂದಿದ್ದ ಬೆಳೆಯಿಂದ ಆಸರೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ದುರಂತ ನೀಡಿದೆ. ಗಾಳಿಯ ರಭಸಕ್ಕೆ ಬೆಂಕಿ ಕ್ಷಣಮಾತ್ರದಲ್ಲಿ ಇಡೀ ಜಮೀನಿಗೆ ಆವರಿಸಿ, ಬೆಳೆ ಕಣ್ಣೆದುರೇ ಸುಟ್ಟು ಕರಕಲಾಗುವುದನ್ನು ಕಂಡು ರೈತರು ಕಣ್ಣೀರಿಟ್ಟಿದ್ದಾರೆ. ಚಿದಾನಂದ ಮೋರಗಾರ,ಮುಬಾರಕ ಜಮಾದಾರ,ಅರ್ಜುನ ಬಾಕರೆ ಗುರುಲಿಂಗ ಜಾಧವ,ಕೃಷ್ಣಾ ಜಾಧವ, ಅರುಣ ಗಾಳಿ,ಶಿವಾನಂದ ಕಲ್ಯಾಣಿ, ಕಾಶಿನಾಥ ಕಲ್ಯಾಣಿ,ಸದಾಶಿವ ಕಲ್ಯಾಣಿ,ತುಕಾರಾಮ ಕಮತೆ, ಸದಾಶಿವ ಕಮತೆ ಅವರ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.
ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಮತ್ತು ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು ಹಾಗೂ ಸ್ಥಳೀಯ ಮುಖಂಡರು, ಸುಟ್ಟು ಹೋದ ಕಬ್ಬಿನ ಬೆಳೆಗೆ ತಕ್ಷಣವೇ ಕಂದಾಯ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು ಹಾಗೂ ಸಂತ್ರಸ್ತ ೧೧ ಜನ ರೈತರಿಗೆ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
PublicNext
03/11/2026 07:05 pm
LOADING...