ಗದಗ: ಶಿಗ್ಲಿ ರಸ್ತೆಯಲ್ಲಿ ಎರಡು ದಿನಗಳ ಹಿಂದೆ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅಪಘಾತದಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವ ವಿಚಾರದಲ್ಲಿ ಲಕ್ಷ್ಮೇಶ್ವರ ಬಸ್ ಡಿಪೋ ಅಧಿಕಾರಿಗಳ ವಿರುದ್ಧ ತಾರತಮ್ಯದ ಆರೋಪ ಕೇಳಿಬಂದಿದ್ದು, ಗಾಯಾಳುಗಳ ಕುಟುಂಬಸ್ಥರು ಡಿಪೋ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಅಪಘಾತದ ಬಳಿಕ ಗಾಯಾಳುಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿ ಲಕ್ಷ್ಮೇಶ್ವರ ಬಸ್ ಡಿಪೋದಿಂದ ಒಟ್ಟು 1 ಲಕ್ಷ 60 ಸಾವಿರ ರೂಪಾಯಿಗಳನ್ನು ಪಡೆದುಕೊಂಡು ಹೋಗಲಾಗಿದೆ. ಆದರೆ ಗಾಯಾಳುಗಳಿಗೆ ತಲಾ ಕೇವಲ 5 ಸಾವಿರ ರೂಪಾಯಿಗಳನ್ನು ನೀಡಿ, ಉಳಿದ ಹಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ಎಲ್ಲ ಹಣವನ್ನು ವಿತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಗಾಯಾಳುಗಳ ಕುಟುಂಬಸ್ಥರು ಡಿಪೋ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಡಿಪೋದಲ್ಲಿ 1 ಲಕ್ಷ 60 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿ ಹಣ ಪಡೆದಿರುವಾಗ, ಗಾಯಾಳುಗಳಿಗೆ ಕೇವಲ 5 ಸಾವಿರ ರೂಪಾಯಿ ನೀಡಿ ಉಳಿದ ಹಣ ಎಲ್ಲಿ ಹೋಯಿತು ಎಂಬುದಕ್ಕೆ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.
ಗಾಯಾಳುಗಳಿಗಾಗಿ ಮೀಸಲಿಟ್ಟಿರುವ 1 ಲಕ್ಷ 60 ಸಾವಿರ ರೂಪಾಯಿಗಳನ್ನು ಸಂಪೂರ್ಣವಾಗಿ ಸಂಬಂಧಪಟ್ಟವರಿಗೆ ವಿತರಿಸಬೇಕು. ಪರಿಹಾರದ ಹಣದ ಹಂಚಿಕೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಪಘಾತದಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಣದ ಹಂಚಿಕೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಮಾತನಾಡಿ ಎಲ್ಲರಿಗೂ ಸಮನಾಗಿ ಒಬ್ಬರಿಗೆ 10 ಸಾವಿರ ರೂಪಾಯಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ನೀಲಪ್ಪ ಶೇರಸೂರಿ ಶರಣು ಗೋಡಿ ಆನಂದ ಗದ್ದಿ ಹನುಮಂತ್ ಶೇರಸೂರಿ ಪ್ರವೀಣ ಶೇರಸೂರಿ ನಿಂಗಪ್ಪ ಕಡ್ಡಿಪೂಜಾರ, ಯಲ್ಲಪ್ಪ ಮಳ್ಳೋಳ್ಳಿ, ನೀಲಪ್ಪ ಕೊರದಾಳ, ನಾಗರಾಜ ಕೆರೂರ, ಗಾಯಗೊಂಡ ಕುಟುಂಬಸ್ಥರು
ಸುರೇಶ ಎಸ್ ಲಮಾಣಿ
Kshetra Samachara
02/11/2026 07:54 pm