ಶಿರಹಟ್ಟಿ: ಬಂಜಾರ ಸಮುದಾಯದಲ್ಲಿ ಗುಳೆ ಹೋಗುವುದು ಸಾಮಾನ್ಯ ಎಂಬ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಹೇಳಿಕೆಗೆ ಬಂಜಾರ ಸಮುದಾಯದ ಮುಖಂಡ ರವಿಕಾಂತ ಅಂಗಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಂಜಾರ ಸಮುದಾಯದ ಜನರು ಗುಳೆ ಹೋಗುವುದನ್ನು ಸಾಮಾನ್ಯ ಸಂಗತಿ ಎಂಬಂತೆ ಬಿಂಬಿಸುವುದು ಸರಿಯಲ್ಲ. ಸಮುದಾಯದ ಜನರು ತಮ್ಮ ಬದುಕಿಗಾಗಿ, ಕುಟುಂಬದ ನಿರ್ವಹಣೆಗಾಗಿ ಹಾಗೂ ಉದ್ಯೋಗದ ಅನಿವಾರ್ಯತೆಯಿಂದ ವಲಸೆ ಹೋಗುತ್ತಿದ್ದಾರೆ. ಇದನ್ನು ಸಾಮಾನ್ಯ ಎಂದು ಹೇಳುವ ಬದಲು ವಲಸೆ ಹೋಗುವ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ಸರ್ಕಾರ ಮೊದಲು ಅರಿತುಕೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರ ಸಮುದಾಯವೂ ಈ ನಾಡಿನ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಶ್ರಮಜೀವಿಗಳಾಗಿರುವ ಸಮುದಾಯದ ಜನರ ಬದುಕಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರಿಗೆ ಶಾಶ್ವತ ಉದ್ಯೋಗ, ಶಿಕ್ಷಣ ಹಾಗೂ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.
ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಮಾತನಾಡುವಾಗ ಸಮುದಾಯದ ಸ್ವಾಭಿಮಾನ ಮತ್ತು ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ರವಿಕಾಂತ ಅಂಗಡಿ ಆಗ್ರಹಿಸಿದರು.
ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರವೇ ಇಂತಹ ಹೇಳಿಕೆ ನೀಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
PublicNext
03/11/2026 10:00 pm
LOADING...