ಗದಗ: ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಿಸುವುದಾಗಿ ಘೋಷಿಸಿದ್ದರೂ, ಗ್ರಾಹಕರಿಗೆ ಮಾತ್ರ ಲೀಟರ್‌ಗೆ ₹12 ಹೆಚ್ಚಳದ ಹೊರೆ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಹಕರು ಹಾಗೂ ಹಾಲಿನ ವಿತರಕರ ನಡುವೆ ಗೊಂದಲ ಮತ್ತು ವಾಗ್ವಾದಕ್ಕೆ ಕಾರಣವಾಗುತ್ತಿದೆ ಎಂದು ಹಾಲಿನ ವಿತರಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಲಿನ ದರ ಏರಿಕೆ ಕುರಿತು ಸರ್ಕಾರ ನೀಡಿದ ಭರವಸೆಗೂ ವಾಸ್ತವದಲ್ಲಿ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿರುವ ದರಕ್ಕೂ ವ್ಯತ್ಯಾಸವಿದೆ. ಇದರಿಂದ ಸಾಮಾನ್ಯ ಜನರ ಕುಟುಂಬದ ಖರ್ಚು ಹೆಚ್ಚಾಗಿದ್ದು, ಹಾಲು ಖರೀದಿಸುವ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ ಎಂದು ವಿತರಕರು ದೂರಿದ್ದಾರೆ.
ಈ ಕುರಿತು ಮಾತನಾಡಿದ ಹಾಲಿನ ವಿತರಕ ಆನಂದ ವಜೆ, ಸರ್ಕಾರದ ದರ ಏರಿಕೆ ನಿರ್ಧಾರದಿಂದ ಗ್ರಾಹಕರು ಮತ್ತು ಹಾಲಿನ ಡೀಲರ್‌ಗಳ ನಡುವೆ ಅನಗತ್ಯ ಗಲಾಟೆ ಉಂಟಾಗುತ್ತಿದೆ. ಸರ್ಕಾರ ಜನರಿಗೆ ಮಾತ್ರವಲ್ಲದೆ ಹಾಲಿನ ವಿತರಕರಿಗೂ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ರೈತರಿಗೆ ಪ್ರತಿ ಲೀಟರ್‌ಗೆ ₹7 ಹೆಚ್ಚುವರಿ ಹಣ ನೀಡುವುದಾಗಿ ಹೇಳುತ್ತಿದೆ. ಆದರೆ ಗ್ರಾಹಕರಿಂದ ₹12 ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಹಾಗಾದರೆ ಉಳಿದ ₹5 ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ವಿತರಕರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಹಾಲಿನ ದರ ಏರಿಕೆಯಿಂದ ರೈತರಿಗೆ ನಿಜವಾಗಿಯೂ ಎಷ್ಟು ಲಾಭವಾಗುತ್ತಿದೆ? ಗ್ರಾಹಕರ ಜೇಬಿನಿಂದ ಹೆಚ್ಚುವರಿಯಾಗಿ ವಸೂಲಾಗುತ್ತಿರುವ ಹಣದ ಲೆಕ್ಕವೇನು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಕೂಡಲೇ ದರ ಏರಿಕೆಯ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಹಾಗೂ ಗ್ರಾಹಕರು ಮತ್ತು ವಿತರಕರ ಗೊಂದಲಕ್ಕೆ ತೆರೆ ಎಳೆಯಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
PublicNext
03/11/2026 07:43 pm
LOADING...