ಮಂಗಳೂರು: ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ ನಡೆಯುತ್ತಿರುವುದು ಪ್ರತಿಯೊಬ್ಬ ಕೊಂಕಣಿ ಭಾಷಿಕನಿಗೆ ಅತೀವ ಹೆಮ್ಮೆಯ ವಿಷಯ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೂಲಕ ಕೊಂಕಣಿ ಸಂಗೀತವನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಮಹತ್ತರವಾದ ಸಾಧನೆಯಾಗಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಬಣ್ಣಿಸಿದರು.
ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘಟನೆ 'ಮಾಂಡ್ ಸೊಭಾಣ್'ನ 40ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ 13 ದಿನಗಳ ಐತಿಹಾಸಿಕ 'ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ'ವನ್ನು ಮಂಗಳವಾರ ಮುಂಜಾನೆ 6 ಗಂಟೆಗೆ ಸಾಂಪ್ರದಾಯಿಕ 'ಗುಮಟ' ವಾದ್ಯ ನುಡಿಸುವ ಮೂಲಕ ನಿರಂತರ ಗಾಯನ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಪ್ರತಿ ಬಾರಿಯೂ ಹತ್ತು ಹಲವು ಬಗೆಯ ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾಗುತ್ತವೆ. ಆದರೆ, ನಮ್ಮ ಕೊಂಕಣಿ ಸಂಗೀತದ ವಿಶ್ವದಾಖಲೆಯೊಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿ ನಿಲ್ಲುತ್ತಿರುವುದು ನಿಜಕ್ಕೂ ಅದ್ಭುತ ಸಂಗತಿ. ಸತತ 12 ದಿನಗಳ ಕಾಲ ಕಿಂಚಿತ್ತೂ ನಿಲ್ಲದೆ, ಆಯಾಸವಿಲ್ಲದೆ ಈ ಗಾನಯಾತ್ರೆಯಲ್ಲಿ ಪಾಲ್ಗೊಂಡು ದಾಖಲೆ ಬರೆಯುವುದು ಸಣ್ಣ ಮಾತಲ್ಲ. ಇದು ಬೃಹತ್ ಸಾಧನೆ. ಈ ದಾಖಲೆಯು ಪ್ರತಿಯೊಬ್ಬ ಕೊಂಕಣಿ ಭಾಷಿಕನ ಹೆಸರಲ್ಲಿ, ನಮ್ಮೆಲ್ಲರ ಹೆಸರಲ್ಲಿ ಶಾಶ್ವತವಾಗಿ ನಿಲ್ಲಲಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ ಎಂದರು.
12 ದಿನ, 6,700ಕ್ಕೂ ಅಧಿಕ ಗಾಯಕರು: ಗಿನ್ನೆಸ್ ವಿಶ್ವ ದಾಖಲೆಯ ಸಾಹಸ
ಸಮ್ಮೇಳನದ ಅಂಗವಾಗಿ ‘ಕೊಂಕಣಿ ನಿರೊಂತರಿ – ಸೊಂಸಾರ್ ಸೊರಾಸೊರಿ’ (ಜಗತ್ತಿನ ಕೊನೆಯವರೆಗೂ ನಿರಂತರ ಕೊಂಕಣಿ) ಶೀರ್ಷಿಕೆಯಡಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನ ಆರಂಭಗೊಂಡಿದೆ. ನವೆಂಬರ್ 3ರಿಂದ 15ರವರೆಗೆ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ನಡೆಯಲಿದೆ.
ಜಗತ್ತಿನ ನಾನಾ ಭಾಗಗಳಿಂದ ಆಗಮಿಸಿರುವ 300 ಗಾಯನ ತಂಡಗಳು ಸರದಿಯಂತೆ ಭಾಗವಹಿಸುತ್ತಿವೆ.
ಇದರಲ್ಲಿ ಗೋವಾದ 53 ತಂಡಗಳು ಸೇರಿದಂತೆ ಬರೋಬ್ಬರಿ 6,700ಕ್ಕೂ ಅಧಿಕ ಗಾಯಕರು ಧ್ವನಿಗೂಡಿಸುತ್ತಿದ್ದಾರೆ. ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ ವಿವಿಧ ಕೊಂಕಣಿ ಉಪಭಾಷೆ, ಸಮುದಾಯ ಮತ್ತು ಸಂಗೀತ ಶೈಲಿಯ 4,500ಕ್ಕೂ ಅಧಿಕ ಹಾಡುಗಳನ್ನು ಹಾಡುವ ಗುರಿ ಹೊಂದಲಾಗಿದೆ.
PublicNext
03/11/2026 11:53 am