ಕಟೀಲು : ನಮಗೆ ನಾವೇ ಸತ್ಯ. ಸಾಧಕರು ನಮಗೆ ರೋಲ್ ಮಾಡೆಲ್ ಆಗಬೇಕು ಎಂದು ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಲೀ ಕಡೇಕಾರ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಮೂರುದಿನಗಳ ಕಾಲ ನಡೆದ ಭ್ರಮರ ಇಂಚರ ನುಡಿಹಬ್ಬ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಡಾ. ಜನಾರ್ದನ ಭಟ್ಟರ ಸಾಹಿತ್ಯ ಸಾಧನೆ ಅನನ್ಯವಾದುದು. ಇಂತಹವರು ನಮಗೆ ಮಾಡೆಲ್ ಆಗಬೇಕು.
ವಿಮರ್ಶೆ ಮಾಡದೆ ಯಾರನ್ನೂ ನಂಬಬಾರದು. ಮಣ್ಣನ್ನು ನೀರನ್ನು, ಪರಿಸರವನ್ನು ಹಾಳು ಮಾಡುವ ಅಧಿಕಾರ ನಮಗಿಲ್ಲ. ಅದೇ ರೀತಿ ನಮ್ಮ ದೇಹವನ್ನೂ ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳಬೇಕು ಎಂದು ಕಡೇಕಾರ್ ಹೇಳಿದರು.
ಸಾಹಿತಿ ಗಣೇಶ ಸಂಕಮಾರ್ ಮಾತನಾಡಿ, ತಂದೆ ತಾಯಿ ಬೈದ ಕೂಡಲೇ, ಮಾಸ್ಟ್ರು ಹೊಡೆದರೆಂದು ಸಾಯುವ ಮಕ್ಕಳನ್ನು ನೋಡುತ್ತಿದ್ದೇವೆ. ಶಾಲೆಗಳಲ್ಲಿ ಭಾಷಾ ವಿಷಯಗಳನ್ನು ದೂರ ಇಟ್ಟಿರುವ ಕಾರಣದಿಂದಲೇ ನಮ್ಮ ಮಕ್ಕಳು ಅವರ ಬದುಕು ಕಟ್ಟುವ ಚಿಂತನೆಯಿಂದ ದೂರವಾಗುತ್ತಿದ್ದಾರೆ. ಮಕ್ಕಳಿಗೆ ಆತ್ಮವಿಶ್ವಾಸ ತುಂಬಿಸುವ ಕೆಲಸ ಇಂತಹ ಸಮ್ಮೇಳನಗಳಿಂದ ಆಗುತ್ತಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ. ಬಿ. ಜನಾರ್ದನ ಭಟ್ ಮಾತನಾಡಿ, sಸಾಹಿತ್ಯ ಬದುಕು ಕಲೆ ಹೀಗೆ ನಾನಾ ವಿಚಾರಗಳು ಇಲ್ಲಿ ಚರ್ಚಿತವಾಗಿವೆ. ವಿದ್ವಾಂಸರ ಮಾತು, ಅನುಭವಿಗಳ ನುಡಿಗಳನ್ನು ಕೇಳುವಂತಾಗಿದೆ. ಮಕ್ಕಳ, ವಿದ್ಯಾರ್ಥಿಗಳ ಪ್ರಾವೀಣ್ಯವನ್ನು ಪ್ರದರ್ಶಿಸುವ ಅವಕಾಶ ನುಡಿಹಬ್ಬ ಸಮ್ಮೇಳನದಲ್ಲಿ ಚೆನ್ನಾಗಿ ಸಿಕ್ಕಿದೆ. ನಾಡಿಗೆ ವಿಶಿಷ್ಟವಾದ ಮಾದರಿಯಾದ ನುಡಿಹಬ್ಬ ಸಮ್ಮೇಳನ ಎಲ್ಲೆಡೆ ಆಗುವಂತಾಗಲಿ ಎಂದರು.
ಡಾ. ಜನಾರ್ದನ ಭಟ್ಟರನ್ನು ಸಂಮಾನಿಸಲಾಯಿತು. ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್, ಮಾಜಿ ಸಾಂಸದ ನಳಿನ್‌ಕುಮಾರ್, ಮಾಜಿ ಸಚಿವ ಅಭಯಚಂದ್ರ, ಉದ್ಯಮಿ ಪ್ರದ್ಯಮ್ನ ರಾವ್, ಲೆಕ್ಸಾ ಲೈಟಿಂಗ್ ಸಂಸ್ಥೆಯ ರೋನಾಲ್ಡ್ ಸಿಲ್ವನ್ ಡಿಸೋಜ, ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್‌ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಶಿಕ್ಷಕ ರಕ್ಷಕ ಸಂಘದ ಪ್ರಮುಖರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು. ಪ್ರದೀಪ್ ಹಾವಂಜೆ, ಕಿರಣ್ ಅತ್ತೂರು ನಿರೂಪಿಸಿದರು.
Kshetra Samachara
03/11/2026 07:42 pm