ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರೈತರ ಪಟ್ಟು - ಮತ್ತೊಂದು ಸಭೆ ನಡೆಸಲು ಎದ್ದು ಹೋದ ಸತೀಶ ಜಾರಕಿಹೊಳಿ!

ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರ ನಿರಂತರ ಹೋರಾಟಕ್ಕೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೈತರ ಸಾಮೂಹಿಕ ಸಭೆ ನಡೆಸಿದರು. ಆದರೆ ಸಾಲು ಸಾಲು ಸಭೆಗಳು ನಡೆದರೂ ರೈತರ ಸಮಸ್ಯೆಗೆ ಮಾತ್ರ ಇನ್ನೂ ಪರಿಹಾರ ಸಿಗದಂತಾಗಿದೆ.

ಸಭೆ ಆರಂಭವಾಗುತ್ತಿದ್ದಂತೆ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. ಕಾರ್ಖಾನೆಗಳ ಪ್ರತಿನಿಧಿಗಳನ್ನೂ ಸಭೆಗೆ ಕರೆಸಬೇಕು ಎಂದು ರೈತರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, "ಕಾರ್ಖಾನೆಗಳ ಮಾಲೀಕರೊಂದಿಗೆ ನಾನೇ ಮಾತನಾಡುತ್ತೇನೆ. ನೀವು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ" ಎಂದು ಹೇಳಿದರು.

ಕಬ್ಬಿಗೆ ಪ್ರತಿ ಟನ್‌ಗೆ ₹4,500 ದರ ಘೋಷಿಸಬೇಕು, ರಾಜ್ಯ ಸರ್ಕಾರದಿಂದ ₹1,000 ಪ್ರೋತ್ಸಾಹಧನ ನೀಡಬೇಕು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್‌ಪಿ) ₹60ಕ್ಕೆ ಹೆಚ್ಚಿಸಬೇಕು ಹಾಗೂ ಎಥೆನಾಲ್ ಉತ್ಪಾದನೆಯ ಸಂಪೂರ್ಣ ಪ್ರಮಾಣವನ್ನು ಖರೀದಿಸಬೇಕು ಎಂದು ರೈತರು ಆಗ್ರಹಿಸಿದರು.

ಈಗಾಗಲೇ ಕಬ್ಬು ಒಣಗುತ್ತಿದ್ದು, ಶೇ.25ರಷ್ಟು ಇಳುವರಿ ಕುಸಿತವಾಗಿದೆ. ಹೀಗಾಗಿ ತಕ್ಷಣ ಕಬ್ಬಿನ ದರ ಘೋಷಿಸಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ರೈತ ಮುಖಂಡರು ಪದೇ ಪದೇ ಒತ್ತಾಯಿಸಿದರು.

ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಕಿಕ್ಕಿರಿದು ಸೇರಿದ್ದರು. ಇಂದು ಸ್ಪಷ್ಟ ನಿರ್ಧಾರ ಹೊರಬೀಳುವವರೆಗೂ ಸಭೆಯ ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಬುಧವಾರ ಜೈಲ್ ಭರೋ ಚಳವಳಿ ನಡೆಸಲಾಗುವುದು. ಸಾವಿರಾರು ರೈತರು ಸ್ವಯಂಪ್ರೇರಿತವಾಗಿ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಇಂದೇ ಎಲ್ಲ ಬೇಡಿಕೆಗಳಿಗೂ ಪರಿಹಾರ ಸಿಗಬೇಕು ಎಂದು ರೈತರು ಪಟ್ಟು ಹಿಡಿದರೂ, ಸಚಿವರು ಕಾರ್ಖಾನೆ ಮಾಲೀಕರೊಂದಿಗೆ ಮತ್ತೊಂದು ಸಭೆ ನಡೆಸುವುದಾಗಿ ತಿಳಿಸಿ, ಆಯ್ದ ರೈತ ಮುಖಂಡರನ್ನು ಮುಂದಿನ ಸಭೆಗೆ ಆಹ್ವಾನಿಸಿದರು. ಬಳಿಕ ಸಭೆಯಿಂದ ಎದ್ದು ತೆರಳಿದರು.

ಇದರಿಂದಾಗಿ ಹಲವು ಸುತ್ತಿನ ಸಭೆಗಳ ಬಳಿಕವೂ ಕಬ್ಬಿನ ದರದ ಕುರಿತು ಅಂತಿಮ ನಿರ್ಧಾರ ಹೊರಬೀಳದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

Edited By :
PublicNext

PublicNext

03/11/2026 09:58 pm

Cinque Terre

5.59 K

Cinque Terre

1

ಸಂಬಂಧಿತ ಸುದ್ದಿ