ಬೆಂಗಳೂರು : ನಾಡಿನ ಜನರ ತೀವ್ರ ವಿರೋಧದ ನಡುವೆಯೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿ, ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಕನಕಪುರದ ಹೆಗ್ಗನೂರು ಕೆಪಿಎಸ್ ಶಾಲೆಗೆ 14 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಶಾಲೆಗಳನ್ನು ಮುಚ್ಚಿರುವ ಸರ್ಕಾರ, ಕೂಡಲೇ ಈ ನೀತಿಯನ್ನು ಕೈಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೆಪಿಎಸ್ ಯೋಜನೆ ವಿಸ್ತರಣೆ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ದತ್ತು ನೀಡುವ ಕುರಿತು ವಿಧಾನಸೌಧದಲ್ಲಿ ಇಂದು ನಡೆಯುತ್ತಿರುವ ಸಭೆಯನ್ನು ಖಂಡಿಸಿ ಕಪ್ಪು ಬಟ್ಟೆ ಪ್ರದರ್ಶಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, "ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳನ್ನು ಉಳಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರವೇ, ಇಂದು 'ಕೆಪಿಎಸ್ ಮ್ಯಾಗ್ನೆಟ್' ಯೋಜನೆಯ ಹೆಸರಿನಲ್ಲಿ ರಾಜ್ಯದ 45,000 ಸರ್ಕಾರಿ ಶಾಲೆಗಳನ್ನು ಮುಚ್ಚಿ ಎನ್ಇಪಿ-2020 ಜಾರಿಗೊಳಿಸುತ್ತಿದೆ. ಈ ಕುರಿತು ಎಡಿಬಿಯಿಂದ ಪಡೆದ ಸಾಲದ ಪತ್ರದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಇದು ನಾಡಿನ ಜನತೆಗೆ ಎಸಗಿರುವ ಕಡು ದ್ರೋಹ" ಎಂದು ತೀವ್ರವಾಗಿ ಖಂಡಿಸಿದರು.
ಮುಂದುವರಿದು, "ಕಾಂಗ್ರೆಸ್ ನಾಯಕರೇ, ನೀವು ದೇಶಾದ್ಯಂತ 'ಪ್ರಜಾಪ್ರಭುತ್ವ ಉಳಿಸಿ' ಎಂದು ಯಾತ್ರೆ ನಡೆಸುತ್ತೀರಿ. ಆದರೆ, ನಿಮ್ಮದೇ ಆಡಳಿತವಿರುವ ರಾಜ್ಯದಲ್ಲಿ ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ನೀವು ಯಾವ ಪ್ರಜಾಪ್ರಭುತ್ವವನ್ನು ಉಳಿಸಲು ಹೊರಟಿದ್ದೀರಿ?" ಎಂದು ಪ್ರಶ್ನಿಸಿದರು.
ಈ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷೆ ಅಪೂರ್ವ ಸಿ.ಎಂ. ವಹಿಸಿದ್ದರು. ಪ್ರತಿಭಟನೆಯಲ್ಲಿ ಎಐಡಿಎಸ್ಓ ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷರಾದ ಹನುಮಂತ, ಅಭಯಾ ದಿವಾಕರ್, ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಸೇರಿದಂತೆ ಇತರ ರಾಜ್ಯ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
PublicNext
04/11/2026 01:41 pm