ಚಿಕ್ಕಮಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ಮೂಲಕ ಕಸಿದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಹಾಲು, ಮೊಸರು, ವಿದ್ಯುತ್, ಪೆಟ್ರೋಲ್ ಹಾಗೂ ಇದೀಗ ಬಸ್ ಪ್ರಯಾಣ ದರವನ್ನೂ ಏರಿಸುವ ಮೂಲಕ ಸರ್ಕಾರ ಜನಸಾಮಾನ್ಯರ ಮೇಲೆ ಗಂಭೀರವಾದ ಆರ್ಥಿಕ ಹೊರೆ ಹೊರಿಸಿದೆ. ಇದು ಜನಪರ ಆಡಳಿತವಲ್ಲ, ಬದಲಾಗಿ ಜನರ ಪಾಲಿನ ಶಾಪ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಬೆಲೆ ಏರಿಕೆಗಳ ಪಟ್ಟಿಯನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಲೀಟರ್‌ಗೆ 46 ರೂಪಾಯಿ ಇದ್ದ ನಂದಿನಿ ಟೋನ್ಡ್ ಹಾಲು 54 ರೂಪಾಯಿಗೆ ಏರಿಕೆಯಾಗಿದ್ದರೆ, 54 ರೂಪಾಯಿ ಇದ್ದ ಮೊಸರಿನ ದರ ಬರೋಬ್ಬರಿ 68 ರೂಪಾಯಿಗೆ ಜಿಗಿದಿದೆ ಎಂದು ವಿವರಿಸಿದ್ದಾರೆ. ಇದರ ಜೊತೆಗೆ ಸಾರಿಗೆ ದರಗಳನ್ನೂ ಇಷ್ಟಬಂದಂತೆ ಏರಿಸಲಾಗಿದ್ದು, ಬಿಎಂಟಿಸಿ ಕನಿಷ್ಠ ಟಿಕೆಟ್ ದರ 6 ರಿಂದ 10 ರೂಪಾಯಿಗೆ ಹಾಗೂ ಗರಿಷ್ಠ ದರ 35 ರಿಂದ 45 ರೂಪಾಯಿಗೆ ಹೆಚ್ಚಳವಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಬಸ್ ದರವನ್ನು 160 ರಿಂದ 197 ರೂಪಾಯಿಗೆ ಏರಿಸುವ ಮೂಲಕ ನಿತ್ಯ ಸಾರ್ವಜನಿಕ ಸಾರಿಗೆಯನ್ನು ನೆಚ್ಚಿಕೊಂಡಿರುವ ಉದ್ಯೋಗಿಗಳು, ಗ್ರಾಮೀಣರು ಹಾಗೂ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ.
ಬರೀ ಸಾರಿಗೆ ದರ ಮಾತ್ರವಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳದಿಂದ ಇಂಧನ ದುಬಾರಿಯಾಗಿದೆ. ವಿದ್ಯುತ್ ದರ, ಸ್ಥಿರ ಶುಲ್ಕ, ಮತ್ತು ಗರಿಷ್ಠ ಪ್ರಯಾಣ ದರ 60 ರಿಂದ 90 ರೂಪಾಯಿಗೆ ಏರಿಕೆಯಾಗಿರುವ ಮೆಟ್ರೋ ಟಿಕೆಟ್ ದರ ಸೇರಿದಂತೆ 200ಕ್ಕೂ ಹೆಚ್ಚು ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಾರಿಗೆ ಹಾಗೂ ಇಂಧನ ವೆಚ್ಚ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಸರಕು ಸಾಗಣೆ ದುಬಾರಿಯಾಗಿ, ಅಂತಿಮವಾಗಿ ಇದರ ಸಂಪೂರ್ಣ ಹೊರೆ ರೈತರು, ಕಾರ್ಮಿಕರು, ಬಡ ಮತ್ತು ಮಧ್ಯಮ ವರ್ಗದವರ ಮೇಲೆಯೇ ಬೀಳುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಜನರ ಆದಾಯ ಹೆಚ್ಚಾಗಿಲ್ಲ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಗ್ಯಾರಂಟಿಗಳ ಬಗ್ಗೆ ಕೊಚ್ಚಿಕೊಳ್ಳುವುದನ್ನು ಬಿಟ್ಟು, ಕೂಡಲೇ ಬಸ್ ಪ್ರಯಾಣ ದರ ಹಾಗೂ ಇತ್ತೀಚೆಗೆ ಜಾರಿಗೆ ತಂದಿರುವ ಅಗತ್ಯ ವಸ್ತುಗಳ ಜನವಿರೋಧಿ ದರ ಏರಿಕೆಗಳನ್ನು ಹಿಂಪಡೆಯಬೇಕು. ಜನರ ಜೇಬಿಗೆ ಕತ್ತರಿ ಹಾಕುವ ಆಡಳಿತವನ್ನು ಹೀಗೆಯೇ ಮುಂದುವರಿಸಿದರೆ, ರಾಜ್ಯದ ಜನತೆ ಈ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು . ಸಿ.ಟಿ ರವಿ ಎಚ್ಚರಿಸಿದ್ದಾರೆ.
Kshetra Samachara
04/11/2026 07:32 pm