ಹೊಸಪೇಟೆ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಜಂಬುನಾಥಹಳ್ಳಿ, ಕೆ.ಎಂ.ಎಂ., ದಾಲ್ಮಿಯಾ ಕ್ಯಾಂಪ್ ಸೇರಿದಂತೆ ವಿವಿಧ ಗಣಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಅವರ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದರು.
ಈ ವೇಳೆ ಸ್ಥಳೀಯರು ತಮ್ಮ ಅಳಲು ತೋಡಿಕೊಂಡು, ಜಂಬುನಾಥಹಳ್ಳಿ ಸೇರಿದಂತೆ ಒಟ್ಟು 13 ಕ್ಯಾಂಪ್ಗಳಲ್ಲಿ ಕಳೆದ 50ರಿಂದ 60 ವರ್ಷಗಳಿಂದ ವಾಸಿಸುತ್ತಿದ್ದರೂ ಇಂದಿಗೂ ಸಮರ್ಪಕ ವಸತಿ ಹಾಗೂ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲ ಎಂದು ತಿಳಿಸಿದರು. ಉತ್ತಮ ರಸ್ತೆಗಳು, ಚರಂಡಿ ವ್ಯವಸ್ಥೆ, ಸುಸಜ್ಜಿತ ಮನೆಗಳು ಹಾಗೂ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜೀವನ ಸಾಗಿಸುವುದು ದುಸ್ತರವಾಗಿದೆ. ಆರೋಗ್ಯ ಕೇಂದ್ರಗಳಿದ್ದರೂ ಸಕಾಲಕ್ಕೆ ವೈದ್ಯರು ಲಭ್ಯವಾಗುತ್ತಿಲ್ಲ. ಸಾರಿಗೆ ಸಂಪರ್ಕದ ಕೊರತೆಯೂ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಸಮಸ್ಯೆಗಳ ಬಗ್ಗೆ ವಿವರಿಸಿದರು.
ಸರ್ಕಾರದಿಂದ ಮನೆ ನಿರ್ಮಿಸಿಕೊಡುವ ಭರವಸೆಗಳು ಹಲವು ವರ್ಷಗಳಿಂದ ಈಡೇರದೆ ಉಳಿದಿವೆ. ಗಣಿ ಮಾಲೀಕರು ತಮ್ಮ ಖಾಸಗಿ ಭೂಮಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಹಲವು ವರ್ಷಗಳೇ ಕಳೆದಿದ್ದರೂ, ಇದುವರೆಗೆ ನಿವೇಶನ ಹಂಚಿಕೆ ಅಥವಾ ಮನೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಜೋಪಡಿಗಳಂತಹ ಮನೆಗಳಲ್ಲಿ ವಾಸಿಸುವುದೇ ಕಷ್ಟವಾಗಿದ್ದು, ಮಳೆಗಾಲದಲ್ಲಿ ಮನೆಗಳು ಸಂಪೂರ್ಣ ಜಲಾವೃತಗೊಳ್ಳುತ್ತವೆ. ಇದರಿಂದ ಮಹಿಳೆಯರು, ಗರ್ಭಿಣಿಯರು ಹಾಗೂ ಬಾಣಂತಿಯರು ತೀವ್ರ ಆತಂಕದಲ್ಲಿ ಬದುಕುವಂತಾಗಿದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಪಕ್ಕದ ಅರಣ್ಯ ಪ್ರದೇಶಗಳಲ್ಲಿ ಆಶ್ರಯ ಪಡೆಯಬೇಕಾದ ದಯನೀಯ ಪರಿಸ್ಥಿತಿಯೂ ಇದೆ ಎಂದು ಅಳಲು ತೋಡಿಕೊಂಡರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಮಹಿಳಾ ಆಯೋಗದ ಅಧ್ಯಕ್ಷರು, 13 ಗಣಿ ಬಾಧಿತ ಕ್ಯಾಂಪ್ಗಳ ಸಮಗ್ರ ಅಭಿವೃದ್ಧಿಗಾಗಿ ಒಟ್ಟು ₹146 ಕೋಟಿ ಅನುದಾನದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈಗಾಗಲೇ ನಿವೇಶನಗಳ ಜೊತೆಗೆ ಮನೆಗಳ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗಳು ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿವೆ ಎಂದು ಹೇಳಿದರು.
ಗಣಿ ಬಾಧಿತ ಪ್ರದೇಶಗಳ ಜನರಿಗೆ ಅಗತ್ಯ ಮೂಲಸೌಕರ್ಯಗಳೊಂದಿಗೆ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಿ, ಎಲ್ಲರೂ ಗೌರವಯುತ ಹಾಗೂ ಸುಸಜ್ಜಿತ ಜೀವನ ನಡೆಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕ್ಯಾಂಪ್ಗಳ ಅಭಿವೃದ್ಧಿಯ ಜೊತೆಗೆ ಯುವಜನರಿಗೆ ಉದ್ಯೋಗ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಅವಕಾಶ ಕಲ್ಪಿಸುವ ಮೂಲಕ ಗಣಿ ಬಾಧಿತ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಸಮುದಾಯ ಭವನಗಳ ದುರ್ಬಳಕೆಗೆ ಅವಕಾಶವಿಲ್ಲ:
ಕ್ಯಾಂಪ್ಗಳಲ್ಲಿರುವ ಸಮುದಾಯ ಭವನಗಳನ್ನು ವೈಯಕ್ತಿಕ ಕಾರ್ಯಕ್ರಮಗಳು ಹಾಗೂ ಮದುವೆ ಸಮಾರಂಭಗಳಿಗೆ ಬಾಡಿಗೆ ನೀಡಲು ಅವಕಾಶವಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು. ಕೊಟ್ರೇಶ್ವರ ನಗರದ ಸಮುದಾಯ ಭವನ ಸೇರಿದಂತೆ ಇತರೆಡೆ ಅನಧಿಕೃತವಾಗಿ ಸ್ಥಳಾವಕಾಶವನ್ನು ಬಳಸಿಕೊಳ್ಳುತ್ತಿದ್ದರೆ ಅಂತಹ ಬಳಕೆಯನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಸಮುದಾಯ ಭವನಗಳನ್ನು ಸ್ಥಳೀಯ ಜನರ ಅಭಿವೃದ್ಧಿಗೆ ಪೂರಕವಾಗಿ ತರಬೇತಿ, ಶಿಕ್ಷಣ ಹಾಗೂ ಇತರೆ ಸಾರ್ವಜನಿಕ ಉಪಯೋಗಿ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಉದ್ಯೋಗ ಮೇಳಗಳನ್ನು ಆಯೋಜಿಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
PublicNext
05/11/2026 10:33 am