ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಠದ ಆಸ್ತಿ ಟ್ರಸ್ಟ್‌ನ ಆಸ್ತಿಯಲ್ಲ... ಮಠದ ಪೀಠಾಧಿಪತಿಯ ಸ್ವತ್ತು, ಮಠಕ್ಕೆ ಭಕ್ತರಾಗಿ ಯಾರೇ ಬಂದರೂ ಸ್ವಾಗತ: ಚಿಂತಾಮಣಿ ಮಠದ ಶಿವಾನಂದ ಭಾರತಿ ಶ್ರೀ

ಹೊಸಪೇಟೆ : ರಾಜ್ಯದ ಮತ್ತೊಂದು ಪ್ರತಿಷ್ಠಿತ ಮಠದ ಕಲಹ ಇದೀಗ ಬೀದಿಗೆ ಬಂದಂತಾಗಿದೆ. ಹೊಸಪೇಟೆ ತಾಲೂಕಿನ ಕೆಲವು ಬ್ರಾಹ್ಮಣರಿಂದ ತೊಂದರೆಯಾಗುತ್ತಿದೆ ಎಂದು ವಿಜಯನಗರ ಜಿಲ್ಲೆಯ ಚಿಂತಾಮಣಿ ಮಠದ ಪೀಠಾಧಿಪತಿ ಶಿವಾನಂದ ಭಾರತಿ ಸ್ವಾಮೀಜಿ ಆರೋಪಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಬ್ರಾಹ್ಮಣರ ಸಂಘವು 1983ರಲ್ಲಿ ನೋಂದಣಿಯಾಗಿದೆ. ಬಳಿಕ ನೋಂದಣಿಯನ್ನು ಪರಿಷ್ಕರಿಸಿಲ್ಲ ಹಾಗೂ ಅಗತ್ಯ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಹೀಗಾಗಿ ಹೊಸಪೇಟೆ ಬ್ರಾಹ್ಮಣರ ಸಂಘ ಅಧಿಕೃತವಾಗಿದ್ದರೂ, ಅದರ ಪದಾಧಿಕಾರಿಗಳು ನಕಲಿಯಾಗಿದ್ದಾರೆ. ಅವರೊಂದಿಗೆ ತಾಲೂಕಿನ ಬ್ರಾಹ್ಮಣರು ಇನ್ನು ಮುಂದೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಶಿವಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನಿನ ಪ್ರಕಾರ ಸಂಘವು ಪ್ರತಿವರ್ಷ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಒಂದು ವೇಳೆ ಮೊದಲ ವರ್ಷ ದಾಖಲೆಗಳನ್ನು ಸಲ್ಲಿಸದಿದ್ದರೆ, ಮೊದಲ ಐದು ವರ್ಷಗಳೊಳಗೆ ದಂಡ ಪಾವತಿಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಸಂಘವನ್ನು ಉಳಿಸಿಕೊಳ್ಳಬೇಕು. ಆದರೆ, ಇದು ನಡೆದಿಲ್ಲ. ಸಂಘವು ರದ್ದತಿಯ ಹಾದಿಯಲ್ಲಿದೆ ಎಂದು ಬಳ್ಳಾರಿಯ ಸಹಕಾರ ಸಂಘಗಳ ಉಪನಿಬಂಧಕರೇ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಹೊಸಪೇಟೆ ತಾಲೂಕು ಬ್ರಾಹ್ಮಣರ ಸಂಘವು ಪದಾಧಿಕಾರಿಗಳಿಲ್ಲದೆ ಅನಾಥವಾಗಿದೆ. ತಾವು ಸಂಘದ ಪದಾಧಿಕಾರಿಗಳು ಎಂದು ಹೇಳಿಕೊಳ್ಳುವ ಕೆಲವರು ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹೊಸಪೇಟೆ ನಾಗರಿಕರು ಜಾಗೃತರಾಗಿರಬೇಕು. ಯಾರಾದರೂ ಹೊಸಪೇಟೆ ತಾಲೂಕು ಸಂಘದ ಪದಾಧಿಕಾರಿಗಳೆಂದು ಹೇಳಿಕೊಂಡರೆ ನಂಬಬಾರದು. ನಂಬಿ ನಕಲಿ ಲೆಟರ್‌ಹೆಡ್‌ನಲ್ಲಿ ಸಹಿ ಹಾಕಿದರೆ ಮುಂದೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

ಉತ್ತರ ಕೊಡಬೇಕಾದಲ್ಲಿ ಕೊಡುತ್ತೇವೆ: ಚಿಂತಾಮಣಿ ಮಠದ ಆರೋಪಗಳ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ಉತ್ತರವನ್ನು ಎಲ್ಲಿ ನೀಡಬೇಕೋ ಅಲ್ಲಿಯೇ ನೀಡುತ್ತೇವೆ. ಮಹಿಳೆಯರ ಕುರಿತು ಮಠದಿಂದ ನಡೆಯುತ್ತಿರುವ ಸಾರ್ವಜನಿಕ ಅವಮಾನವನ್ನು ತಕ್ಷಣ ನಿಲ್ಲಿಸಬೇಕು ಎಂದು ಮಾತ್ರ ಮನವಿ ಮಾಡುತ್ತೇನೆ ಎಂದು ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ದಿವಾಕರ್ ಪ್ರತಿಕ್ರಿಯಿಸಿದ್ದಾರೆ.

Edited By :
PublicNext

PublicNext

05/11/2026 02:51 pm

Cinque Terre

1 K

Cinque Terre

0

ಸಂಬಂಧಿತ ಸುದ್ದಿ