ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ : ನ.7ರಂದು ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಸಮಾವೇಶ ನಡೆಯಲಿದೆ:ಗೌತಮ್ ಬೆಂಗಳೆ.

ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ತಂತ್ರಜ್ಞಾನ ಹಾಗೂ ಉದ್ಯಮಶೀಲತೆ ಕ್ಷೇತ್ರದ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ನ. 7ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಸಭಾಭವನದಲ್ಲಿ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಸಮಾವೇಶ ಆಯೋಜಿಸಲಾಗಿದೆ ಎಂದು ಆಲ್ಟ್ ಡಿಜಿಟ್ ಮುಖ್ಯಸ್ಥ ಗೌತಮ ಬೆಂಗಳೆ ತಿಳಿಸಿದ್ದಾರೆ.

ಶಿರಸಿಯ ಕದಂಬ ಮಾರ್ಕೆಟಿಂಗ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಲ್ಲಿ ಜಿಲ್ಲೆಯ ಲಕ್ಷಾಂತರ ವಿದ್ಯಾವಂತ ಯುವಜನರು ಉದ್ಯೋಗ ಅರಸಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳಿದ್ದಾರೆ. ಇದೀಗ ದೂರಸ್ಥ ಕೆಲಸ, ಡಿಜಿಟಲ್ ಸಂಪರ್ಕ ಹಾಗೂ ಸರ್ಕಾರದ ಬಿಯಾಂಡ್ ಬೆಂಗಳೂರು ಉಪಕ್ರಮದಂತಹ ಹೊಸ ಅವಕಾಶಗಳನ್ನು ಬಳಸಿಕೊಂಡು ಜಿಲ್ಲೆಯ ಪ್ರತಿಭಾವಂತ ಯುವಕರನ್ನು ಮತ್ತೆ ತವರಿನಲ್ಲೇ ಉಳಿದು ಬೆಳೆಯುವಂತೆ ಮಾಡುವ ಪ್ರಯತ್ನವನ್ನು ಈ ಸಮಾವೇಶದ ಮೂಲಕ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಸ್ಥಾಪಿಸುವುದು, ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಯುವ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.

ಈ ಸಮಾವೇಶವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಇತರ ಶಾಸಕರು ಸೇರಿದಂತೆ ದೇಶ-ವಿದೇಶಗಳಲ್ಲಿ ಐಟಿ ಹಾಗೂ ಐಟಿ ಆಧಾರಿತ ಸೇವಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರ ಕನ್ನಡ ಮೂಲದ ಸುಮಾರು ನೂರು ಮಂದಿ ತಂತ್ರಜ್ಞಾನ ವೃತ್ತಿಪರರು ಮತ್ತು ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಲೆಕ್ಕಪರಿಶೋಧಕ ಎಸ್.ಜಿ. ಹೆಗಡೆ, ಟೆಕ್ ಪಾರ್ಕ್ ಮುಖ್ಯಸ್ಥ ವಿನಾಯಕ ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

05/11/2026 12:28 pm

Cinque Terre

776

Cinque Terre

0

ಸಂಬಂಧಿತ ಸುದ್ದಿ