ನಂಜನಗೂಡು: ತಾಲ್ಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೋರನಕಟ್ಟೆ ಕಾಲೋನಿಯಲ್ಲಿ ಹುಲಿ ದಾಳಿಗೆ ಆದಿವಾಸಿ ಮಹಿಳೆಯೊಬ್ಬರು ಬಲಿಯಾಗಿರುವ ದುರ್ಘಟನೆ ನಡೆದಿದೆ.
ಮಾಚಮ್ಮ (45) ಮೃತಪಟ್ಟ ದುರ್ದೈವಿ. ಮಧ್ಯಾಹ್ನದ ವೇಳೆ ತಮ್ಮ ಜಮೀನಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಹುಲಿ, ಮಹಿಳೆಯನ್ನು ನಂಜದೇವರ ಬೆಟ್ಟದ ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಮಹಿಳೆಯ ಮುಖ ಹಾಗೂ ಎದೆ ಭಾಗಕ್ಕೆ ತೀವ್ರವಾಗಿ ಕಚ್ಚಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದಾರೆ.
ಇದೇ ಸ್ಥಳದಲ್ಲಿ ಈ ಹಿಂದೆಯೂ ಹುಲಿ ದಾಳಿಗೆ ಹಾದನೂರು ಗ್ರಾಮದ ರೈತ ಶಿವಣ್ಣ ಎಂಬುವರು ಬಲಿಯಾಗಿದ್ದರು. ಇದೀಗ ಮತ್ತೊಮ್ಮೆ ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹುಲಿ ದಾಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಹುಲಿ ದಾಳಿಗಳು ನಡೆಯುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
PublicNext
05/11/2026 01:27 pm
LOADING...