ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳಲ್ಲಿ ಸರ್ಕಾರಿ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪ ಹಾಗೂ ಅಡ್ಡಿಪಡಿಸುವಿಕೆಯ ವಿರುದ್ಧ ರಾಜವಂಶಸ್ಥೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇರ ಎಚ್ಚರಿಕೆ ನೀಡಿದ್ದಾರೆ. ಅರಮನೆಯ ಪರಂಪರೆ ಹಾಗೂ ಆಚರಣೆಗಳ ರಕ್ಷಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಸ್ಪಷ್ಟ ಆದೇಶವನ್ನು ಅಧಿಕಾರಿಗಳಿಗೆ ನೆನಪಿಸಿರುವ ಅವರು, ನಿಯಮ ಮೀರಿದರೆ ನ್ಯಾಯಾಂಗ ನಿಂದನೆ ಹಾಗೂ ಕಾನೂನು ಹೋರಾಟಕ್ಕಾಗಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ತಾವು ಸ್ವತಂತ್ರರು ಎಂದು ಗುಡುಗಿದ್ದಾರೆ.
ಅರಮನೆಯ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಈ ಹಿಂದೆಯೇ ಹೈಕೋರ್ಟ್ ನೀಡಿರುವ ಸ್ಪಷ್ಟ ತೀರ್ಪನ್ನು ಪ್ರಸ್ತಾಪಿಸಿದ ಪ್ರಮೋದಾದೇವಿ ಒಡೆಯರ್, "ಅರಮನೆಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳ ಕುರಿತು ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿದೆ. ಆದಾಗ್ಯೂ, ಪ್ರತಿ ವರ್ಷವೂ ನಾವು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಉತ್ಸವದ ಸೌಹಾರ್ದತೆಗಾಗಿ ಕಾನೂನು ಕ್ರಮಗಳಿಂದ ದೂರ ಉಳಿದು ಸಹಕರಿಸುತ್ತಿದ್ದೇವೆ. ಆದರೆ, ನಮ್ಮ ಈ ಸೌಜನ್ಯವನ್ನು ಆಡಳಿತ ಯಂತ್ರ ದೌರ್ಬಲ್ಯವೆಂದು ಭಾವಿಸಬಾರದು" ಎಂದು ಎಚ್ಚರಿಸಿದ್ದಾರೆ.
ದಸರಾ ಕಾರ್ಯಕ್ರಮಗಳ ಹಂಚಿಕೆ ಹಾಗೂ ಧಾರ್ಮಿಕ ದಿನಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜಮಾತೆ ಕಟ್ಟುನಿಟ್ಟಿನ ನಿಯಮವನ್ನು ಮುಂದಿಟ್ಟಿದ್ದಾರೆ:
ಮೊದಲ 7 ದಿನ ಮಾತ್ರ ಸರ್ಕಾರಿ ಕಾರ್ಯಕ್ರಮ: ನವರಾತ್ರಿಯ ಮೊದಲ ದಿನದಿಂದ ಏಳನೇ ದಿನದವರೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ತನ್ನ ಸಾರ್ವಜನಿಕ ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ನಿರ್ವಹಿಸಬಹುದು.
ಆಯುಧಪೂಜೆ ಮತ್ತು ವಿಜಯದಶಮಿ ನಮಗೆ ಬಿಡಿ: ಆದರೆ ನವರಾತ್ರಿಯ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ದಿನಗಳಾದ ಆಯುಧಪೂಜೆ ಮತ್ತು ವಿಜಯದಶಮಿಯಂದು ಅರಮನೆಯಲ್ಲಿ ನಡೆಯುವ ಪಾರಂಪರಿಕ ಧಾರ್ಮಿಕ ಕಾರ್ಯಗಳಿಗೆ ಸಂಪೂರ್ಣ ಮುಕ್ತಾವಕಾಶ ನೀಡಬೇಕು.
ಈ ಪವಿತ್ರ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಯಾವುದೇ ರೀತಿಯ ಅಡ್ಡಿ-ಆತಂಕಗಳನ್ನು ಉಂಟುಮಾಡಬಾರದು ಎಂದು ಅವರು ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದ್ದಾರೆ.
ಅಧಿಕಾರಿಗಳ ಅತಿಯಾದ ಹಸ್ತಕ್ಷೇಪಕ್ಕೆ ಬ್ರೇಕ್ ಅಗತ್ಯ
ಅರಮನೆಯ ಪಾರಂಪರಿಕ ಧಾರ್ಮಿಕ ಪಾವಿತ್ರ್ಯವನ್ನು ಕಾಪಾಡುವ ಜವಾಬ್ದಾರಿ ಆಡಳಿತಕ್ಕಿರಬೇಕೇ ಹೊರತು, ಪೂಜಾ ಕೈಂಕರ್ಯಗಳಿಗೆ ತಡೆಯೊಡ್ಡುವುದಲ್ಲ. ಅಧಿಕಾರಿಗಳು ಇತಿಹಾಸ ಮತ್ತು ನ್ಯಾಯಾಲಯದ ಆದೇಶವನ್ನು ಗೌರವಿಸಿ ನಡೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೆಜ್ಜೆ ಇಡುವುದು ಅನಿವಾರ್ಯವಾಗುತ್ತದೆ ಎಂಬ ಸಂದೇಶವನ್ನು ರಾಜಮಾತೆ ರವಾನಿಸಿದ್ದಾರೆ.
PublicNext
26/10/2026 08:36 pm