ಬೆಂಗಳೂರು: : ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ನಗರದ ಮೆಜೆಸ್ಟಿಕ್‌ನಲ್ಲಿ ಇಂದು ಬಿಜೆಪಿ ವತಿಯಿಂದ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಸುಮಾರು ಐದಾರು ಸಾವಿರ ಕೋಟಿ ರೂಪಾಯಿ ಹಣ ನೀಡಬೇಕಿದೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವ ಯೋಗ್ಯತೆ ಇಲ್ಲದೆ ಜನರ ಮೇಲೆ ತೆರಿಗೆ ವಿಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಒಂದು ಪೈಸೆಯನ್ನೂ ಕ್ರೋಡೀಕರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಜನರ ಮೇಲೆ ತೆರಿಗೆಯ ರೂಪದಲ್ಲಿ ಹೊರೆ ಹಾಕುತ್ತಿರುವುದು ದುಷ್ಟ ಸರ್ಕಾರದ ನಡೆ ಎಂದು ಆಕ್ಷೇಪಿಸಿದರು. ಇದೊಂದು ಲೂಟಿ ಸರ್ಕಾರ ಎಂದು ದೂರಿದರು.
ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್‌ನಿಂದಲೇ ಐದರಿಂದ ಆರು ಸಾವಿರ ಕೋಟಿ ರೂಪಾಯಿ ಹಣ ಸರ್ಕಾರದ ಖಜಾನೆಗೆ ಬಂದಿದೆ. ಈ ಹಣವನ್ನು ಜನರಿಗೆ ವಾಪಸ್ ನೀಡಿ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಹಣ ಸಂಗ್ರಹವಾಗಿದೆಯಲ್ಲ, ಅದನ್ನು ವಾಪಸ್ ಕೊಡಿ. ಆದರೆ, ಅದನ್ನು ನೀಡುವ ಯೋಗ್ಯತೆ ಸರ್ಕಾರಕ್ಕಿಲ್ಲ. ಸರ್ಕಾರ ದಿವಾಳಿಯಾಗಿದ್ದು, ಸಂಬಳ ನೀಡಲೂ ಹಣವಿಲ್ಲ ಎಂದು ಆರ್. ಅಶೋಕ್ ಟೀಕಿಸಿದರು.
ತಳ್ಳುವ ಬಸ್‌ಗಳಿವೆ..
ಹಾಲು, ಮೊಸರು ಮತ್ತು ತುಪ್ಪದ ದರ ಏರಿಕೆ ಮಾಡಿದ್ದಾರೆ. ಜನಸಾಮಾನ್ಯರು ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಇಂದು ಸಾರಿಗೆ ಇಲಾಖೆಯನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಇಲಾಖೆಯನ್ನು ಇಂತಹ ಸ್ಥಿತಿಗೆ ತಂದಿದ್ದಾರೆ. ಬಸ್‌ಗಳಿಗೆ ಟೈರ್ ಇಲ್ಲ, ಟ್ಯೂಬ್ ಇಲ್ಲ, ಹ್ಯಾಂಡಲ್ ಇಲ್ಲ, ಸ್ಟೇರಿಂಗ್ ಇಲ್ಲ, ಬ್ಯಾಟರಿ ಇಲ್ಲ. ಬಸ್‌ಗಳು ಓಡುವುದೇ ಇಲ್ಲ, ತಳ್ಳುವ ಬಸ್‌ಗಳೂ ಇವೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ನೀತಿಗೆಟ್ಟ ಕಾಂಗ್ರೆಸ್ ಸರ್ಕಾರವಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂದು ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
PublicNext
05/11/2026 02:13 pm