ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಉಡುಪಿ: ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ವ್ಯವಸ್ಥೆ ಬಗ್ಗೆ ಮಾತನಾಡುವುದೇ ಒಂದು ಅತ್ಯಂತ ಸೂಕ್ಷ್ಮದ ವಿಷಯವೂ ಹೌದು.ಮತೀಯ ಸೌಹಾರ್ದ , ಮತೀಯ ಸಂಘರ್ಷದ ಕುರಿತಾಗಿ ತುಂಬಾ ಅಕಾಡೆಮಿಕ್ಕಾಗಿ ಚಿಂತನೆ ಮಾಡಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇದನ್ನು ಬರೇ ಕಾನೂನು ಪೊಲೀಸ್ ಇಲಾಖೆ ಮತ್ತು ವಿಶೇಷ ಕೇೂಮು ಸಂಘರ್ಷ ನಿಗ್ರಹ ದಳ ರಾಜಕಾರಣಿಗಳ ಮಾತುಕತೆಯ ಮಧ್ಯಸ್ಥಿಕೆಯಿಂದ ನಿಯಂತ್ರಣಕ್ಕೆ ತರುವುದು ಕಷ್ಟ ಸಾಧ್ಯವಾದ ವಿಚಾರ ಅನ್ನುವಷ್ಟರ ಮಟ್ಟಿಗೆ ಇದು ಜನರ ಮನಸ್ಸಿನೊಳಗೆ ಮಡುಗಟ್ಟಿನಿಂತಿದೆ.
ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕೃತ್ಯ ಹತ್ಯೆಗಳ ಸೂಕ್ಷ್ಮತೆಯ ಒಳಹೊಕ್ಕು ನೇೂಡಿದಾಗ ಇದು ಬರೇ ಧರ್ಮದ ಕಾರಣಕ್ಕಾಗಿಯೆಓ ರಾಜಕೀಯ ಕಾರಣಕ್ಕಾಗಿಯೋ ನಡೆದ ಹತ್ಯೆಗಳಲ್ಲ.ಬದಲಾಗಿ ಪ್ರತಿಯೊಂದು ಕೃತ್ಯದೊಳಗೆ ಬಲವಾದ ವೈಯುಕ್ತಿಕ ಕಾರಣಗಳೇ ಎದ್ದುಕಾಣುತ್ತದೆ.ಆದರೆ ಇಂತಹ ಹತ್ಯೆಗಳು ನಡೆದ ಅನಂತರದಲ್ಲಿ ಇದಕ್ಕೆ ಮತೀಯ ರಾಜಕೀಯ ಬಣ್ಣಗಳನ್ನು ಲೇಪಿಸಿ ವೈಭವೀಕರಿಸುವ ಕೆಲಸ ನಿರಂತರವಾಗಿ ನಡೆಯುತ್ತಾ ಬಂದಿರುವ ಕಾರಣ ಇದನ್ನು ಮತೀಯ ಸಂಘರ್ಷ ಅನ್ನುವ ಹಣೆ ಪಟ್ಟಿ ಕಟ್ಟಿ ರಾಜಕೀಯ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ಮೇಲಾಟ ನಡೆಸುತ್ತಿರುವುದು ಸ್ವಷ್ಟವಾಗಿ ಕಾಣುತ್ತದೆ.ಹಾಗಾಗಿ ಮೊದಲು ಇಂತಹ ಘಟನೆಗಳು ನಡೆದಾಗ ಪ್ರತಿಯೊಂದನ್ನು ಧರ್ಮದ ರಾಜಕೀಯವಾಗಿ ಬಣ್ಣ ಹಚ್ಚುವ ವ್ಯಕ್ತಿಗಳನ್ನು ಗುರುತಿಸಿ ಕಾನುಾನಾತ್ಮಕವಾಗಿ ಎಚ್ಚರಿಕೆ ನೀಡ ಬೇಕು.ಮಾಧ್ಯಮಗಳನ್ನು ನಿಯಂತ್ರಣ ಮಾಡ ಬೇಕು.ಪ್ರಚೇೂದನಾತ್ಮಕ ಹೇಳಿಕೆ ಪ್ರತಿಹೇಳಿಕೆಗಳನ್ನುಮೊದಲಾಗಿ ನಿಯಂತ್ರಣ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಒಂದಂತೂ ನಿಜ.ಯಾವನೇ ಒಬ್ಬ ವ್ಯಕ್ತಿ ತಾನು ಮೆಚ್ಚಿ ಕೊಂಡ ಯಾವುದೇ ಧರ್ಮವಿರಲಿ ರಾಜಕೀಯ ಪಕ್ಷವಿರಲಿ ಅದೇ ಕಾರಣಕ್ಕಾಗಿಯೇ ಇನ್ನೊಬ್ಬ ವ್ಯಕ್ತಿಯನ್ನು ಖಂಡಿತವಾಗಿಯೂ ಕೊಲೆ ಮಾಡಲು ಅವನ ಮನಸ್ಸಾಗಲಿ ದೇಹವಾಗಲಿ ಒಪ್ಪಲಾರದು.ಇದರ ಪರಿಣಾಮವೇನು ಅನ್ನುವುದರ ಪರಿಜ್ಞಾನ ಒಬ್ಬ ಮನುಷ್ಯನಾದವನಿಗೆ ಖಂಡಿತವಾಗಿಯೂ ತಿಳಿದಿರುತ್ತದೆ.ತಿಳಿದಿಲ್ಲವೆಂದರೆ ಆತ ಮಾನಸಿಕಾಗಿ ಅಸ್ವಸ್ಥ ಅನ್ನುವುದು ಸ್ವಷ್ಟ.
ಒಬ್ಬ ವ್ಯಕ್ತಿಯ ಜೀವ ತೆಗೆಯಲು ಮುಂದಾಗುತ್ತಾನೆ ಅಂದರೆ ಈ ಘಟನೆಯೊಳಗೆ ಸಂಬಂಧಿಸಿದ ವ್ಯಕ್ತಿಗಳ ಮಧ್ಯೆ ಬಲವಾದ ಒಂದು ವೈಷಮ್ಯವೋ ಮೇೂಸದ ಆರ್ಥಿಕ ವ್ಯವಹಾರವೋ ಹೆಣ್ಣು, ಹೊನ್ನು, ಮಣ್ಣು ... ಕಾರಣಗಳು ಬಹು ಮುಖ್ಯವಾಗಿ ಕಾಣ ಬಹುದು.
ಆದರೆ ಇಂದಿನ ಕರಾವಳಿಯ ಪರಿಸ್ಥಿತಿ ಏನಾಗಿದೆ ಅಂದರೆ ಘಟನೆಗಳು ನಡೆದಾಗ ಈಮೇಲಿನ ವಾಸ್ತವಿಕ ಕಾರಣವನ್ನು ಮೊದಲಾಗಿ ಕಾಣುವ ಮನಸ್ಥಿತಿಯಲ್ಲಿ ನಾವಿಲ್ಲ. ಬದಲಾಗಿ ಮೊದಲು ನಾವು ಕಾಣುವುದು ಸತ್ತ ವ್ಯಕ್ತಿ ಯಾವ ಜಾತಿ ಯಾವ ಧರ್ಮ ಯಾವ ಪಕ್ಷ ಇದನ್ನೇ ಮೊದಲ ಅಸ್ತ್ರವಾಗಿ ಹಿಡಿದುಕೊಂಡು ನಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತೇವೆ. ಈ ನಡುವೆ ನಿಜವಾದ ಕಾರಣ ಮರೆಮಾಚಿ ಹೇೂಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯಲ್ಲಿ ಮತೀಯ ಬಣ್ಣ ರಾಜಕೀಯ ಲೇಪನ ನೀಡಿ ಅವರವರ ಬೇಳೆ ಬೇಯಿಸಿಕೊಳ್ಳುವ ಕೆಲಸ ಮುಂದುವರಿಯುತ್ತಿರುವ ಕಾರಣಕ್ಕಾಗಿಯೇ ಕರಾವಳಿ ಜಿಲ್ಲೆ ಮತೀಯ ಸಂಘರ್ಷದ ನೆಲ ಅನ್ನುವ ಕಪ್ಪು ಚುಕ್ಕೆಯನ್ನು ಹೊತ್ತು ತಿರುಗುವ ಪರಿಸ್ಥಿತಿಗೆ ಬಂದು ನಿಂತಿದೆ.
ಯಾರೇೂ ಒಬ್ಬನ ಪ್ರಚೇೂದಕ ಮಾತುಗಳನ್ನು ಕೇಳಿ ಇನ್ನೊಬ್ಬನ ಅಮೂಲ್ಯವಾದ ಜೀವವನ್ನು ಬದುಕನ್ನು ಮುಗಿಸಿ ಬಿಡುವ ಮಟ್ಟಿಗೆ ಕರಾವಳಿಯ ಮನಸ್ಸುಗಳು ಮುಂದಾಗಲಾರವು ಅನ್ನುವುದು ನನ್ನ ವಿಶೇಷವಾದ ನಂಬಿಕೆ.ಈ ಎಲ್ಲಾ ಸಂದರ್ಭದಲ್ಲಿ ಹುಟ್ಟಿ ಬರುವ ಪ್ರಚೇೂದಕ ಮಾತುಗಳು ಪ್ರತಿ ಹೇಳಿಕೆಗಳು ಬರೇ ಅವರ ವೈಯುಕ್ತಿಕ ಪ್ರಚಾರ ಲಾಭಕ್ಕಾಗಿಯೇ ಸೀಮಿತ ಬಿಟ್ಟರೆ ಒಂದು ಆರೇೂಗ್ಯ ಪೂರ್ಣ ವಾದ ನೆಮ್ಮದಿಯ ಬದುಕನ್ನು ಬಯಸುವ ಜನರ ಮನಸ್ಸು ಹಾಳು ಮಾಡಲು ಸಾಧ್ಯವಾಗಬಾರದು ಮಾತ್ರವಲ್ಲ ಸಾಧ್ಯವೂ ಇಲ್ಲ.
ಇತ್ತೀಚೆಗೆ ಹೈಕೋರ್ಟ್ ನೀಡಿದ ಒಂದು ತುಪ್ಪ ನ್ನು ನಾವು ಈ ಸಂದರ್ಭದಲ್ಲಿ ಗಂಭೀರವಾಗಿ ನೆನಪಿಸಲೇ ಬೇಕು.ಯಾರೋ ತಿಳಿಗೇಡಿಗಳು ತಪ್ಪು ಕೃತ್ಯ ಮಾಡಿ ಜೈಲು ಸೇರಿರುತ್ತಾರೆ. ಅವರಿಗೆ ಕ್ಷಮಾದಾನ ಮಾಡಿ ಜೈಲಿನಿಂದ ಮುಕ್ತಿ ಗೊಳಿಸುವ ಕೆಲಸವನ್ನು ಸರ್ಕಾರ ಮಾಡುವುದಕ್ಕೆ ತಡೆ ಮಾಡಿರುವುದು ಅತ್ಯಂತ ಶ್ಲಾಘನೀಯ ತೀರ್ಪು.ಇಲ್ಲವಾದರೆ ಇಂತಹ ಹತ್ಯೆಗಳು ಕೃತ್ಯಗಳು ರಾಜಕೀಯ ಪಕ್ಷಗಳ ಕೃಪಾಕಟಾಕ್ಷದಲ್ಲಿ ನಡೆಯಲು ಸಂವಿಧಾನಾತ್ಮಕವಾಗಿ ದಾರಿಮಾಡಿಕೊಡ ಬಹುದು.ಒಟ್ಟಿನಲ್ಲಿ ಕರಾವಳಿ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಹೇಯ ಕೃತ್ಯಗಳನ್ನು ತಡೆಯುವಲ್ಲಿ ಆರೇೂಗ್ಯ ಪೂರ್ಣ ವಾದ ಶೈಕ್ಷಣಿಕ ಚಿಂತನೆಗಳು ಹೆಚ್ಚು ಹೆಚ್ಚು ನಡೆಯ ಬೇಕಾಗಿದೆ.
PublicNext
03/06/2025 11:28 am