ಬೆಂಗಳೂರು: ಕೆ.ಆರ್. ನಗರ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಕೆ.ಆರ್. ನಗರ (ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ) ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿಸಿತ್ತು. ಅದರಂತೆ ಇದೀಗ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶನಿವಾರ ಬೆಳಗ್ಗೆಯಿಂದಲೇ ವಿಚಾರಣೆ ನಡೆಸಿದರು. ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎಸ್ಪಿಪಿ ಬಿ.ಎನ್. ಜಗದೀಶ, ಅಧಿಕಾರಯುತ ಸ್ಥಾನದಲ್ಲಿದ್ದ ಪ್ರಜ್ವಲ್ ರೇವಣ್ಣ ಸಂತ್ರಸ್ತ ಮಹಿಳೆಯನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಅವಿದ್ಯಾವಂತೆಯಾಗಿದ್ದ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆದಿದೆ. ಅಪರಾಧಿಯ ಕೈಯಲ್ಲಿ ಸಂತ್ರಸ್ತೆ ಸುಲಭದ ಬಲಿಯಾಗಿದ್ದಳು. ಆಕೆಯ ಒಪ್ಪಿಗೆಯಿಲ್ಲದೇ ಅತ್ಯಾಚಾರದ ವಿಡಿಯೋ ಸಹ ಮಾಡಿಕೊಂಡಿದ್ದರು. ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದಲೇ, ಅಪರಾಧಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದು, ಅವುಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಇನ್ನು ವಿಡಿಯೋ ಹೊರ ಬಂದ ನಂತರ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಡಿಯೋ ಬಹಿರಂಗವಾದ ಬಳಿಕ ಆಕೆ ಹಾಗೂ ಆಕೆಯ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಿಂಸೆ ಅನುಭವಿಸಿದ್ದಳು ಎಂದು ಬಿ.ಎನ್. ಜಗದೀಶ ಅವರು ಕೋರ್ಟ್‌ಗೆ ತಿಳಿಸಿದರು.
PublicNext
02/08/2025 04:17 pm